ಹೈಕೋರ್ಟ್‌ನಲ್ಲಿ ನ್ಯಾಯಪೀಠದ ಮುಂದೆಯೇ ಕತ್ತು ಕೊಯ್ದುಕೊಂಡ ವ್ಯಕ್ತಿ

ಮಂಗಳೂರು(ಬೆಂಗಳೂರು): ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳ ಕೋರ್ಟ್‌ ಹಾಲ್ ಸಂಖ್ಯೆ 1ರಲ್ಲಿ ಎ.3ರಂದು ವ್ಯಕ್ತಿಯೊಬ್ಬರು ಬ್ಲೇಡ್ ನಿಂದ ತಮ್ಮ ಕತ್ತು ಕೊಯ್ದುಕೊಂಡ ಘಟನೆ ನಡೆದಿದೆ.

ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಎಚ್. ಪಿ.ಪ್ರಭಾಕರ ಶಾಸ್ತ್ರಿ ಅವರಿದ್ದ ವಿಭಾಗೀಯ ನ್ಯಾಯಪೀಠ ಎಂದಿನಂತೆ ದೈನಂದಿನ ಪ್ರಕರಣಗಳ ವಿಚಾರಣೆ ನಡೆಸುತ್ತಿತ್ತು. ಮಧ್ಯಾಹ್ನ 1.15ರ ಸಮಯದಲ್ಲಿ ಕ್ರಮ ಸಂಖ್ಯೆ 26 ರ ಪ್ರಕರಣವನ್ನು ಕೋರ್ಟ್ ಆಫೀಸರ್ ಕೂಗುತ್ತಿದ್ದಂತೆಯೇ ಮಧ್ಯ ವಯಸ್ಸಿನ ವ್ಯಕ್ತಿಯೊಬ್ಬರು ಒಂದಷ್ಟು ಫೈಲುಗಳೊಂದಿಗೆ ನ್ಯಾಯಪೀಠದ ಮುಂದೆ ಬಂದು ನಿಂತರು. ನೋಡ ನೋಡುತ್ತಿದ್ದಂತೆಯೇ ಆ ವ್ಯಕ್ತಿ ತಾವು ತಂದಿದ್ದ ಹರಿತವಾದ ಬ್ಲೇಡ್‌ನಂತಹ ಆಯುಧದಿಂದ ತಮ್ಮ ಕತ್ತು ಕೊಯ್ದುಕೊಂಡರು. ತಕ್ಷಣವೇ ಮುಖ್ಯ ನ್ಯಾಯಮೂರ್ತಿಗಳು ಪೊಲೀಸರನ್ನು ಕರೆದು ಆ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದರು. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ವ್ಯಕ್ತಿಯನ್ನು ಹೊರಗೆ ಕರೆದುಕೊಂಡು ಹೋದರು. ಹೆಚ್ಚಿನ ವಿವರಗಳು ಲಭ್ಯವಾಗಬೇಕಿದೆ.

‘ಹೈಕೋರ್ಟ್ ಒಳ ಪ್ರವೇಶಕ್ಕೆ ಭಾರಿ ಬಿಗಿ ಭದ್ರತೆ ಇದ್ದರೂ ಈ ವ್ಯಕ್ತಿ ಇಂತಹ ಆಯುಧದೊಂದಿಗೆ ಹೇಗೆ ಒಳ ಪ್ರವೇಶಿಸಿದರು ಮತ್ತು ಪೊಲೀಸರು ಏನು ಮಾಡುತ್ತಿರುತ್ತಾರೆ’ ಎಂದು ನ್ಯಾಯಮೂರ್ತಿ ಪ್ರಭಾಕರ ಶಾಸ್ತ್ರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನ್ಯಾಯಮೂರ್ತಿ ಎಚ್.ಪಿ.ಪ್ರಭಾಕರ ಶಾಸ್ತ್ರಿ ಇಂದು (ಏ.3) ನಿವೃತ್ತಿ ಹೊಂದುತ್ತಿದ್ದಾರೆ.

LEAVE A REPLY

Please enter your comment!
Please enter your name here