ಮಂಗಳೂರು: ದ.ಕ ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಮುಂಜಾಗ್ರತಾ ಕ್ರಮವಾಗಿ 1157 ಮಂದಿ ಮೇಲೆ ಕ್ರಮ ಜರುಗಿಸಲಾಗಿದೆ. 806 ಮಂದಿ ಮೇಲೆ ಬೌಂಡ್ ಓವರ್ ಮಾಡಲಾಗಿದೆ. 75 ಮಂದಿಯನ್ನು ವಿವಿಧ ಜಿಲ್ಲೆಗಳಿಗೆ ಗಡಿಪಾರು ಮಾಡಲಾಗಿದೆ. 8 ಮಂದಿ ಮೇಲೆ ಗೂಂಡಾ ಕಾಯ್ದೆ ದಾಖಲಿಸಲಾಗಿದೆ. 4 ಮಂದಿ ಮೇಲೆ ಹೈಕೋರ್ಟ್ ಅಡ್ವೈಸರಿ ಕಮಿಟಿಯಿಂದ ಗೂಂಡಾ ಕಾಯ್ದೆ ಅಡಿ ಒಂದು ವರ್ಷದ ಅವಧಿಗೆ ಬಂಧನ ಮಾಡಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರು ನಗರದ ಒಟ್ಟು 42 ಕಡೆಯಲ್ಲಿ ಸಿಎಪಿಎಫ್ ತುಕಡಿ ಸ್ಥಳೀಯ ಪೊಲೀಸ್ ನೊಂದಿಗೆ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ. ನಗರದ ನಾಲ್ಕು ವಿಧಾನ ಸಭಾ ಕ್ಷೇತ್ರದಲ್ಲಿ 12 ಎಸ್ಎಸ್ಟಿ ಚೆಕ್ ಪೋಸ್ಟ್ ನಿಯೋಜನೆ ಮಾಡಲಾಗಿದೆ. ಚುನಾವಣಾ ನೀತಿ ಸಂಹಿತೆ ನಂತರ ನಗರದಲ್ಲಿ ಒಟ್ಟು 2224489/- ನಗದು, 887950 ಮೌಲ್ಯದ ಅಮಲು ಪದಾರ್ಥ, ಒಟ್ಟು ಮೂರು ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಾಗಿದೆ ಎಂದು ಹೇಳಿದರು.
ಮಂಗಳೂರು ನಗರದಲ್ಲಿ ಚುನಾವಣಾ ಬಂದೋಸ್ತ್ಗಾಗಿ 46 ಪಿಎಸ್ಐ ಸೆಕ್ಟರ್ ಮೊಬೈಲ್ಗಳು, 14 ಪಿಐ ಸೂಪರ್ ವಿಷನ್ ಸೆಕ್ಟರ್ ಅಧಿಕಾರಿಗಳು, 4 ಎಸಿಪಿ ನೋಡಲ್ ಅಧಿಕಾರಿಗಳು, 1003 ಪೋಲಿಸ್ ಸಿಬ್ಬಂದಿಗಳು, 350 ಗೃಹ ರಕ್ಷಕ ಸಿಬ್ಬಂದಿಗಳು, 17 ಫಾರೆಸ್ಟ್ ಗಾರ್ಡ್ ನಿಯೋಜನೆ ಮಾಡಲಾಗಿದ್ದು, 36 ಕ್ರಿಟಿಕಲ್ ಮತಗಟ್ಟೆಗಳಿಗೆ ಕೇಂದ್ರೀಯ ಭದ್ರತಾ ಪಡೆ 16 ಎಎಸ್ಐ ನಿಯೋಜನೆ ಮಾಡಲಾಗಿದೆ. ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ಷ್ಮ ಪ್ರದೇಶದಲ್ಲಿ 3 ಪಿಐ, 21 ಪಿಎಸ್ಐ, 13 ಎಎಸ್ಐ, 43 ಪಿಸಿ,ಎಫ್ಜಿ, ಸೇರಿ 80 ಮಂದಿ ನಿಯೋಜನೆ ಮಾಡಲಾಗಿದೆ.ನಗರದಲ್ಲಿ 2 ಸಿಆರ್ಪಿಎಫ್, 1 ಕೆಎಸ್ಆರ್ಫಿ ತುಕುಡಿಗಳನ್ನು ನಿಯೋಜನೆ ಮಾಡಲಾಗಿದೆ ಎಂದು ಹೇಳಿದ್ದಾರೆ.