ಮಂಗಳೂರು: ಜಾರ್ಜ್ ಫೆರ್ನಾಂಡಿಸ್ ನನಗೆ ದೊಡ್ಡ ಮಟ್ಟದ ಸ್ಫೂರ್ತಿ ನೀಡಿದವರು. ಅವರ ಆದರ್ಶಗಳನ್ನು ಮುಂದಿಟ್ಟು ರಾಜಕಾರಣದಲ್ಲಿ ಇರಬೇಕೆಂದು ಬಯಸಿದ್ದೇನೆ. 2000ನೇ ಇಸವಿಯಲ್ಲಿ 50ನೇ ಗಣರಾಜ್ಯೋತ್ಸವ ಪರೇಡ್ ಸಂದರ್ಭದಲ್ಲಿ ದೆಹಲಿಯಲ್ಲಿ ಎನ್ಸಿಸಿ ಕೆಡೆಟ್ ಆಗಿ ಪಾಲ್ಗೊಂಡಿದ್ದೆ. ಅಂದಿನ ಪ್ರಧಾನಿ ವಾಜಪೇಯಿ ಮತ್ತು ರಕ್ಷಣಾ ಮಂತ್ರಿ ಜಾರ್ಜ್ ಫೆರ್ನಾಂಡಿಸ್ ಅವರನ್ನು ಹತ್ತಿರದಿಂದ ಕಂಡಿದ್ದೆ. ಅದೇ ನನಗೆ ಮುಂದೆ ದೇಶ ಸೇವೆಗೆ ಮತ್ತು ಸಮಾಜ ಸೇವೆಗೆ ಸ್ಪೂರ್ತಿ ನೀಡಿತ್ತು ಎಂದು ದ.ಕ ಲೋಕಸಬಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಹೇಳಿದ್ದಾರೆ.
ಕ್ಯಾ.ಬ್ರಿಜೇಶ್ ಚೌಟ ಅವರು ತಮ್ಮ ಚುನಾವಣಾ ಪ್ರಚಾರದ ಕೊನೆಯಲ್ಲಿ ಮಾಜಿ ರಕ್ಷಣಾ ಮಂತ್ರಿ ದಿವಂಗತ ಜಾರ್ಜ್ ಫೆರ್ನಾಂಡಿಸ್ ಅವರ ಬಿಜೈ ಚರ್ಚ್ ಬಳಿಯಿರುವ ಸಮಾಧಿಗೆ ನಮನ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಮಂಗಳೂರಿನಲ್ಲಿ ಹುಟ್ಟಿ ಬೆಳೆದು ಮುಂಬೈ, ಬಿಹಾರದಲ್ಲಿ ರಾಜಕೀಯ ಜೀವನ ನಡೆಸಿದ ಜಾರ್ಜ್ ಫೆರ್ನಾಂಡಿಸ್ ನಮಗೆಲ್ಲ ಆದರ್ಶ ಪ್ರಾಯರು. ತಮ್ಮದೇ ಕನಸಿನಂತೆ ಕೊಂಕಣ ರೈಲ್ವೇ ಹಳಿಯನ್ನು ಅಭಿವೃದ್ಧಿ ಪಡಿಸಿದ್ದು ಜಾರ್ಜ್ ಫೆರ್ನಾಂಡಿಸ್ ಹೆಗ್ಗಳಿಕೆ. ಅವರು ತುಳುನಾಡಿನ ಹೆಮ್ಮೆ. ಸರಳತೆಯ ಸಾಕಾರಮೂರ್ತಿಯಾಗಿದ್ದ ಜಾರ್ಜ್ ತುಳುನಾಡಿನ ಹೆಮ್ಮೆಯ ಮಗ. ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ಅವರ ಕೊಡುಗೆ ದೊಡ್ಡದಿದೆ. ಜಾರ್ಜ್ ಫೆರ್ನಾಂಡಿಸ್ ಸವೆಸಿದ ಹಾದಿಯಲ್ಲೇ ಮುನ್ನಡೆಯುತ್ತೇನೆ. ಅವರ ಸರಳತೆ, ದೂರದೃಷ್ಟಿ ನನಗೆ ಆದರ್ಶ ಎಂದು ಹೇಳಿದ್ದಾರೆ.
ಅಭ್ಯರ್ಥಿ ಘೋಷಣೆಯಾದ ಕೂಡಲೇ ಕದ್ರಿಯ ಯುದ್ಧ ಸ್ಮಾರಕಕ್ಕೆ ತೆರಳಿ ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದ್ದೆ. ಅಲ್ಲಿಂದಲೇ ಪ್ರಚಾರ ಆರಂಭಿಸಿದ್ದೆ. ಈಗ ಜಾರ್ಜ್ ಫೆರ್ನಾಂಡಿಸ್ ಅವರ ಸಮಾಧಿಗೆ ನಮಿಸಿ, ಅವರ ರೀತಿಯಲ್ಲೇ ನಡೆಯುತ್ತೇನೆ ಎಂದು ಹೇಳಿ ಪ್ರಚಾರ ಕೊನೆಗೊಳಿಸುತ್ತಿದ್ದೇನೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಚುನಾವಣಾ ಪ್ರಭಾರಿ ಕ್ಯಾ.ಗಣೇಶ್ ಕಾರ್ಣಿಕ್, ಜಗದೀಶ್ ಶೇಣವ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.