ಮಂಗಳೂರು/ದರ್ಭಾಂಗಾ: ಮದುವೆಯ ಸಂಭ್ರಮದಲ್ಲಿದ್ದ ಮನೆಯಲ್ಲಿ ಈಗ ಸೂತಕದ ಛಾಯೆ ಆವರಿಸಿದೆ. ಪಟಾಕಿ ಸಿಡಿಸುವ ವೇಳೆ ಮದುವೆ ಮಂಟಪಕ್ಕೆ ಬೆಂಕಿ ಹತ್ತಿಕೊಂಡು, 6 ಜನರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಎ.26ರಂದು ಬಿಹಾರದ ದರ್ಭಾಂಗಾ ಜಿಲ್ಲೆಯಲ್ಲಿ ಈ ದುರ್ಘಟನೆ ನಡೆದಿದೆ. ಸುನೀಲ್ ಪಾಸ್ವಾನ್(26), ಲೀಲಾದೇವಿ(23), ಕಾಂಚನದೇವಿ(26), ಸಿದ್ದಾಂತ್ ಕುಮಾರ್(4), ಶಶಾಂಕ್ ಕುಮಾರ್( 3 ) ಮತ್ತು ಸಾಕ್ಷಿ ಕುಮಾರಿ(5) ಮೃತ ಪಟ್ಟವರಾಗಿದ್ದಾರೆ.
ಬಹೇರಾ ಪೊಲೀಸ್ ಠಾಣೆ ವ್ಯಾಪ್ತಿಯ ಅಲಿನಗರದಲ್ಲಿ ಗುರುವಾರ ರಾತ್ರಿ 11.15 ರ ಸುಮಾರಿಗೆ ಈ ಘಟನೆ ನಡೆದಿದೆ. ಪಟಾಕಿ ಸಿಡಿಸುವ ವೇಳೆ ಮಂಟಪಕ್ಕೆ ಬೆಂಕಿ ಹತ್ತಿಕೊಂಡಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಮಂಟಪದಲ್ಲಿ ಇರಿಸಲಾಗಿದ್ದ ಕೆಲವು ದಹನಕಾರಿ ವಸ್ತುಗಳಿಂದ ಬೆಂಕಿ ವೇಗವಾಗಿ ಹರಡಿದೆ. ಘಟನೆಯಲ್ಲಿ ಮೂರು ಹಸುಗಳು ಬೆಂಕಿಗೆ ಆಹುತಿಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ‘ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿಗಳು ತೆರಳಿದ್ದು, ಬೆಂಕಿಯನ್ನು ಹತೋಟಿಗೆ ತರಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ’ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಜಗುನಾಥ ರೆಡ್ಡಿ ತಿಳಿಸಿದ್ದಾರೆ.