ರೇವಣ್ಣ ಮನೆಯಲ್ಲಿ ಕೆಲಸಕ್ಕಿದ್ದ ಮಹಿಳೆ ನಾಪತ್ತೆ – ಅಪಹರಣ ಪ್ರಕರಣ ದಾಖಲು

ಮಂಗಳೂರು (ಮೈಸೂರು): ಪ್ರಜ್ವಲ್ ರೇವಣ್ಣ ಸೆಕ್ಸ್ ಹಗರಣದಲ್ಲಿ ಸಂಕಷ್ಟ ಎದುರಿಸುತ್ತಿರುವ ಮಾಜಿ ಸಚಿವ ಎಚ್ ಡಿ ರೇವಣ್ಣಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ತನ್ನ ತಾಯಿ ನಾಪತ್ತೆಯಾಗಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ರೇವಣ್ಣ ವಿರುದ್ದ ಮೈಸೂರಿನಲ್ಲಿ ದೂರು ದಾಖಲಿಸಿದ್ದಾರೆ.

ಜೆಡಿಎಸ್ ಶಾಸಕ ಹೆಚ್​ಡಿ ರೇವಣ್ಣಗೆ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಮತ್ತೊಂದು ಸಂಕಷ್ಟ ಎದುರಾಗಿದ್ದು, ವ್ಯಕ್ತಿಯೊಬ್ಬರು ತನ್ನ ತಾಯಿ ನಾಪತ್ತೆಯಾಗಿದ್ದಾರೆ. ಬಿಡುಗಡೆಯಾದ ಅಶ್ಲೀಲ ವಿಡಿಯೊದಲ್ಲಿ ಅವರ ಚಿತ್ರವೂ ಇತ್ತು, ಬಳಿಕ ಅವರು ಕಣ್ಮರೆಯಾಗಿದ್ದಾರೆ ಎಂದು ಮೈಸೂರಿನ ಕೆಆರ್​​ ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ. ನಾಪತ್ತೆಯಾಗಿರುವ ಮಹಿಳೆಯ ಪುತ್ರ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ಅಶ್ಲೀಲ ವಿಡಿಯೋ ವಿವಾದದಲ್ಲಿ ನನ್ನ ತಾಯಿಯ ಚಿತ್ರವೂ ಇದೆ. ವಿಡಿಯೋಗಳು ಬಹಿರಂಗವಾದ ಬಳಿಕ ತಾಯಿ ದಿಢೀರ್ ನಾಪತ್ತೆಯಾಗಿದ್ದಾರೆ’ ಎಂದು ಸಂತ್ರಸ್ತ ವ್ಯಕ್ತಿ ದೂರಿನಲ್ಲಿ ತಿಳಿಸಿದ್ದಾರೆ. ದೂರಿನ ಅನ್ವಯ ಹೆಚ್​ಡಿ ರೇವಣ್ಣ ವಿರುದ್ಧ ಸೆಕ್ಷನ್ 364/A 365 ಹಾಗೂ 34 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ರೇವಣ್ಣರನ್ನು ಆರೋಪಿ ಸಂಖ್ಯೆ 1 ಎಂದೂ ಸತೀಶ್ ಬಾಬು ಎಂಬವರನ್ನು ಆರೋಪಿ ಸಂಖ್ಯೆ 2 ಎಂದೂ ನಮೂದಿಸಲಾಗಿದೆ.

ದೂರಿನಲ್ಲಿ ಏನಿದೆ?

ನನ್ನ ತಂದೆಗೆ ಮೂವರು ಮಕ್ಕಳು, ನನ್ನ ತಾಯಿ ಹೊಳೇನರಸಿಪುರದ ಚೆನ್ನಾಂಬಿಕ ಥಿಯೇಟರ್ ಪಕ್ಕ ಇರುವ ಎಚ್‌ಡಿ ರೇವಣ್ಣ ಅವರ ಮನೆಯಲ್ಲಿ ಸುಮಾರು 6 ವರ್ಷ ಕೆಲಸ‌ ಮಾಡಿದ್ದರು. ನಂತರ ಕೆಲಸ ಬಿಟ್ಟು ಬಂದು ನಮ್ಮೂರಿನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಈಗ ಲೋಕಸಭೆ ಚುನಾವಣೆ ವೇಳೆ ನಮಗೆ ಪರಿಚಯಸ್ಥರಾಗದ್ದ ಸತೀಶ್ ಎಂಬವರು ಭವಾನಿ ಅಕ್ಕರವರು ಕರೆಯುತ್ತಿದ್ದಾರೆ ಎಂದು ಹೇಳಿ ನನ್ನ ತಾಯಿಯನ್ನು ಕರೆದುಕೊಂಡು ಹೋಗಿದ್ದಾರೆ. ಚುನಾವಣೆಯ ದಿವಸ ಬೆಳಿಗ್ಗೆ ನನ್ನ ತಾಯಿಯನ್ನು ಸತೀಶ್ ವಾಪಸ್ಸು  ಕರೆದುಕೊಂಡು ಬಂದಿದ್ದಾರೆ. ನನ್ನ ತಂದೆ ಮತ್ತು ತಾಯಿಗೆ ಪೊಲೀಸ್ ಬಂದರೆ ಏನೂ ಹೇಳಬೇಡಿ, ಅವರಿಗೆ ಸಿಗಬೇಡಿ, ನಿಮ್ಮ ಮೇಲೆ ಕೇಸ್ ಆಗುತ್ತದೆ. ಬಂದರೆ ನನಗೆ ತಿಳಿಸಿ ನಾನು ಬಂದು ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಏಪ್ರಿಲ್ 29ರಂದು 9ಗಂಟೆಗೆ ಮತ್ತೆ ಬಂದ ಸತೀಶ್, ನಿಮ್ಮ ತಾಯಿ ಪೊಲೀಸ್‌ನವರಿಗೆ ಸಿಕ್ಕಿ ಹಾಕಿಕೊಂಡರೆ ಕೇಸು ಆಗುತ್ತದೆ ಮತ್ತೆ ನೀವು ಸಹ ಜೈಲಿಗೆ ಹೋಗಬೇಕಾಗುತ್ತದೆ. ರೇವಣ್ಣ ಸಾಹೇಬರು ಕರೆದುಕೊಂಡು ಬರಲು ಹೇಳಿದ್ದಾರೆ ಎಂದು ನನ್ನ ತಾಯಿಗೆ ಹೇಳಿ ನನ್ನ ತಾಯಿಯನ್ನು ಒತ್ತಾಯ ಮಾಡಿಕೊಂಡು ಸತೀಶ್ ಅವರು ಹೀರೋ ಹೊಂಡಾ ಸ್ಪ್ಲೆಂಡ‌ರ್ ಬೈಕಿನಲ್ಲಿ ಕರೆದುಕೊಂಡು ಹೋದರು. ನನ್ನ ತಾಯಿಯನ್ನು ಎಲ್ಲಿಗೆ ಕರೆದುಕೊಂಡು ಹೋದರು ಎಂಬುದು ನಮಗೆ ಗೊತ್ತಿಲ್ಲ. ಮೇ.1ರಂದು ನಮ್ಮ ತಾಯಿಯ ವಿಡಿಯೋ ಬಗ್ಗೆ ಸ್ನೇಹಿತರು ನನಗೆ ಮಾಹಿತಿ ನೀಡಿದ್ದಾರೆ. ನಿನ್ನ ಅಮ್ಮನ ಕಾಲು ಕಟ್ಟಿ ಪ್ರಜ್ವಲ್ ಬಲತ್ಕಾರ ಮಾಡಿದ್ದಾರೆ ಎಂದು ಹೇಳಿದರು. ಈ ಬಗ್ಗೆ ದೊಡ್ಡ ಕೇಸಾಗಿರುವುದಾಗಿ ನನಗೆ ತಿಳಿಸಿದರು. ನಂತರ ನಾನು ರಾತ್ರಿ ಫೋನ್ ಮಾಡಿ ನನ್ನ ತಾಯಿ ಬಗ್ಗೆ ವಿಚಾರಿಸಿದೆ. ನನ್ನ ತಾಯಿಯನ್ನು ವಾಪಾಸು ಕರೆದುಕೊಂಡು ಬರುವಂತೆ ಹೇಳಿದೆ, ಆದರೆ ಹಲ್ಲೆ ಪ್ರಕರಣವೊಂದರಲ್ಲಿ ನಿಮ್ಮ ತಾಯಿ ಆರೋಪಿ ಎಂದು ಸುಳ್ಳು ಹೇಳಿದ್ದಾರೆ. ನನ್ನ ತಾಯಿಯನ್ನು ಹೆದರಿಸಿ ಒತ್ತಾಯವಾಗಿ ಕರೆದುಕೊಂಡು ಹೋಗಿ ಕೂಡಿ ಹಾಕಿದ್ದಾರೆ, ನನ್ನ ತಾಯಿಯ ಜೀವಕ್ಕೆ ಅಪಾಯವಿದೆ, ಆದ್ದರಿಂದ ನನ್ನ ತಾಯಿಯನ್ನು ಪತ್ತೆ ಮಾಡಬೇಕಾಗಿ ಕೇಳಿಕೊಳ್ಳುತ್ತೇನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here