ತುಂಬೆ ಡ್ಯಾಂನಲ್ಲಿ ನೀರಿನಮಟ್ಟ ಇಳಿಕೆ-ಮಂಗಳೂರಲ್ಲಿ ಎರಡು ದಿನಕ್ಕೊಮ್ಮೆ ಮಾತ್ರವೇ ನೀರು ಪೂರೈಕೆ-ಇಲ್ಲಿದೆ ಮಾಹಿತಿ

ಮಂಗಳೂರು: ತುಂಬೆ ಡ್ಯಾಂ‌ನಲ್ಲಿ ನೀರಿನ ಮಟ್ಟ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದ್ದು, ಮೇ 5ರಿಂದ ನಗರದಲ್ಲಿ ಕುಡಿಯುವ ನೀರಿನ ರೇಶನಿಂಗ್ ನಡೆಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದ್ದು, ನಗರಕ್ಕೆ ಎರಡು ದಿನಕ್ಕೊಮ್ಮೆ ನೀರು ಪೂರೈಕೆಯಾಗಲಿದೆ.

ಜಿಲ್ಲಾಧಿಕಾರಿ ಮುಲೈಮುಗಿಲನ್ ಅಧ್ಯಕ್ಷತೆಯಲ್ಲಿ ಶುಕ್ರವಾರ ಮಂಗಳೂರು ಪಾಲಿಕೆಯಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣ ಪ್ರಾಧಿಕಾರದ ಮಹತ್ವದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಅದರಂತೆ ಲಭ್ಯವಿರುವ ನೀರನ್ನು ನಗರ ಪ್ರದೇಶಕ್ಕೆ (ಮಂಗಳೂರು ದಕ್ಷಿಣ) ಮತ್ತು ಸುರತ್ಕಲ್ ಪ್ರದೇಶಕ್ಕೆ (ಮಂಗಳೂರು ಉತ್ತರ) ಪರ್ಯಾಯ ದಿನಗಳಲ್ಲಿ ಕುಡಿಯುವ ನೀರು ಸರಬರಾಜುಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ದ.ಕ ಜಿಲ್ಲೆಯಲ್ಲಿ ಅತಿಯಾದ ಪೂರ್ವ ಮುಂಗಾರು ಮಳೆ ಕೊರತೆಯಾಗಿದೆ. ಇದರಿಂದಾಗಿ ಸುಬ್ರಹ್ಮಣ್ಯ ಸಹಿತ ವಿವಿಧೆಡೆ ಮಳೆಯಾಗಲಿಲ್ಲ. ನಿರೀಕ್ಷಿತ ಪ್ರಮಾಣದಲ್ಲಿ ತುಂಬೆ ಡ್ಯಾಂನಲ್ಲಿ ನೀರು ಸಂಗ್ರಹವಾಗದ ಕಾರಣ ನೀರಿನ ಪೂರೈಕೆಯಲ್ಲಿ ರೇಶನಿಂಗ್ ಮಾಡಲು ನಿರ್ಧರಿಸಲಾಗಿದೆ.

ಕಳೆದ ವರ್ಷವೂ ರೇಶನಿಂಗ್: ತುಂಬೆಯಲ್ಲಿ ನೀರಿನ ಮಟ್ಟ ಇಳಿಕೆಯಾದ ಪರಿಣಾಮ 2023ರಲ್ಲಿ ಮೇ 4ರಿಂದ ನಗರದಲ್ಲಿ ನೀರಿನ ರೇಶನಿಂಗ್ ನಡೆಸಲಾಗಿತ್ತು. ದಿನ ಬಿಟ್ಟು ದಿನ ನೀರು ಪೂರೈಕೆಗೆ ನಿರ್ಧಾರ ಮಾಡಲಾಗಿತ್ತು. ಜೂನ್ ತಿಂಗಳಲ್ಲಿ ಮಳೆಯಾದ ಬಳಿಕ ರೇಶನಿಂಗ್ ನಿಲ್ಲಿಸಲಾಗಿತ್ತು. ಸಾರ್ವಜನಿಕರು ನೀರು ಪೋಲು ಮಾಡದೇ ಸದ್ಬಳಕೆ ಮಾಡಬೇಕು. ಜನರಲ್ಲಿ ನೀರಿನ ಮಹತ್ವದ ಬಗ್ಗೆ ಜಾಗೃತಿಯನ್ನು ಮೂಡಿಸಬೇಕು. ನೀರಿನ ರೇಶನಿಂಗ್ ಮಾಡಲು ಸೂಕ್ತ ವೇಳಾಪಟ್ಟಿಯನ್ನು ತಯಾರಿಸಿ ಸಮರ್ಪಕವಾಗಿ ಎಲ್ಲ ಕಡೆ ನೀರು ಪೂರೈಕೆಯಾಗುವಂತೆ ನಿಗಾವಹಿಸಬೇಕು ಎಂದು ದ.ಕ. ಜಿಲ್ಲಾಧಿಕಾರಿ ಮುಲೈಮುಗಿಲನ್ ಸೂಚಿಸಿದ್ದಾರೆ. ನೀರಿನ ಸಮಸ್ಯೆ ಇರುವ ಸೋಮೇಶ್ವರ ಹಾಗೂ ಕೋಟೆಕಾರು ಪ್ರದೇಶಗಳಲ್ಲಿ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಆಗುತ್ತಿದ್ದು, ಅದರ ಬಗ್ಗೆಯೂ ಅಧಿಕಾರಿಗಳು ಗಮನಹರಿಸುತ್ತಿರಬೇಕು. ಮುಂದಿನ ಮಳೆಗಾಲದವರೆಗೂ ಯಾವುದೇ ರೀತಿಯ ನೀರಿನ ಸಮಸ್ಯೆ ಉಂಟಾಗದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು ಎಂದರು.

ಮಂಗಳೂರಿನಲ್ಲಿ‌ ನೀರಿನ ಸರಬರಾಜು ವಿವರ: ಮೇ 5ರಂದು (ಬೆಸ ದಿನಗಳು)
ಬೆಂದೂರು ರೇಚಕ ಸ್ಥಾವರ: ಕೋರ್ಟ್ ವಾರ್ಡ್, ರಥಬೀದಿ, ಬಾವುಟಗುಡ್ಡೆ ಟ್ಯಾಂಕ್, ಆಕಾಶವಾಣಿ ಟ್ಯಾಂಕ್, ಪದವು ಟ್ಯಾಂಕ್, ಗೋರಿಗುಡ್ಡೆ, ಸೂಟರ್‌ಪೇಟೆ, ಶಿವಬಾಗ್, ಬೆಂದೂರ್, ಕದ್ರಿ, ವಾಸ್‌ಲೇನ್, ಬೆಂದೂರ್ ಲೋ ಲೆವೆಲ್ ಪ್ರದೇಶಗಳಾದ ಕಾರ್‌ಸ್ಟ್ರೀಟ್, ಕುದ್ರೋಳಿ ಫಿಲ್ಡಿಂಗ್ ಹಾರ್ಬರ್, ಕೊಡಿಯಾಲಬೈಲು ಇತ್ಯಾದಿ.
ಪಡೀಲು ರೇಚಕ ಸ್ಥಾವರ: ಮಂಗಳಾದೇವಿ, ಅತ್ತಾವರ, ಬಾಬುಗುಡ್ಡೆ, ವೆಲೆನ್ಸಿಯ, ಜಪ್ಪಿನಮೊಗರು, ಬಿಕರ್ನಕಟ್ಟೆಟ್ಯಾಂಕ್, ಉಲ್ಲಾಸ್ ನಗರ, ಬಜಾಲ್, ತಿರುವೈಲು, ವಾಮಂಜೂರು.
ಶಕ್ತಿ ನಗರ ಟ್ಯಾಂಕ್:
ಕುಂಜತ್ತಬೈಲ್, ಮುಗೋಡಿ, ಶಕ್ತಿನಗರ, ಸಂಜಯ ನಗರ, ಪ್ರೀತಿ ನಗರ, ಮಂಜಡ್ಕ ರಾಜೀವನಗರ, ಬೋಂದೆಲ್, ಗಾಂಧೀನಗರ, ಶಾಂತಿನಗರ, ಕಾವೂರು. ಪಣಂಬೂರು ಡೈರೆಕ್ಟ್ ಲೈನ್ ಕಂಕನಾಡಿ, ನಾಗುರಿ, ಪಂಪ್‌ವೆಲ್, ಬಲ್ಲೂರುಗುಡ್ಡೆ, ಪಡೀಲ್.

ಮೇ 6ರಂದು (ಸಮ ದಿನಗಳು):
ಪಣಂಬೂರು ರೇಚಕ ಸ್ಥಾವರ: ಸುರತ್ಕಲ್‌, ಎನ್‌ಐಟಿಕೆ, ಮುಕ್ಕ ಹೊಸಬೆಟ್ಟು ಕುಳಾಯಿ, ಜನತಾ ಕಾಲನಿ, ಬೈಕಂಪಾಡಿ, ಪಣಂಬೂರು, ಮೀನಕಳಿಯ.
ಪಡೀಲ್ ರೇಚಕ ಸ್ಥಾವರ:
ಬಜಾಲ್‌, ಜಲ್ಲಿಗುಡ್ಡೆ, ಮುಗೇರು, ಎಕ್ಕೂರು, ಸದಾಶಿವ ನಗರ, ಅಳಪೆ, ಮೇಘ ನಗರ, ಮಂಜಳಿಕೆ, ಕಂಕನಾಡಿ ರೈಲು ನಿಲ್ದಾಣ ಪ್ರದೇಶ, ಕುಡುಪು, ಪಾಂಡೇಶ್ವರ, ಸ್ಟೇಟ್‌ ಬ್ಯಾಂಕ್, ಗೂಡ್‌ಶೆಡ್, ದಕ್ಕೆ ಕಣ್ಣೂರು, ನಿಡೇಲ್, ಶಿವನಗರ, ಕೊಡಕ್ಕಲ್, ನೂಜಿ, ಸರಿಪ್ಪಳ್ಳ, ಉಲ್ಲಾಸ್‌ನಗರ, ವೀರನಗರ. ಶಕ್ತಿನಗರ ಟ್ಯಾಂಕ್ ಕಂಡೆಟ್ಟು ಕುಲಶೇಖರ, ಮರೋಳಿ, ಕಕ್ಕೆಬೆಟ್ಟು ಸಿಲ್ವರ್ ಗೇಟ್, ಕೊಂಗೂರು ಮಠ, ಪ್ರಶಾಂತ್ ನಗರ. ತುಂಬೆ-ಪಣಂಬೂರು ಡೈರೆಕ್ಟ್ ಲೈನ್ ಮುಡಾ ಪಂಪ್‌ ಹೌಸ್, ಕೊಟ್ಟಾರ ಚೌಕಿ ಪಂಪ್ ಹೌಸ್, ಕೂಳೂರು ಪಂಪ್‌ಹೌಸ್, ಕಾಪಿಕಾಡ್, ದಡ್ಡಲಕಾಡು ಪ್ರದೇಶ, ಬಂಗ್ರಕೂಳೂರು.

ಕೈಗಾರಿಕಾ ವಲಯದಲ್ಲಿ ಮೂರು ದಿನಕ್ಕೊಮ್ಮೆ ನೀರು: ಮಳೆಗಾಲ ಆರಂಭದವರೆಗೆ ಕುಡಿಯುವ ನೀರಿನ ಬವಣೆ ತಪ್ಪಿಸಲು ಮುಂಜಾಗ್ರತಾ ಕ್ರಮವಾಗಿ ಕೈಗಾರಿಕಾ ವಲಯದಲ್ಲಿ ಕೆಲಸ ಮಾಡುವ ಮಂದಿಗೆ ಕುಡಿಯಲು ಬೇಕಾಗಿರುವ ನೀರನ್ನು ಮೂರು ದಿನಕ್ಕೊಂದು ಬಾರಿ ಮಿತವಾಗಿ ಪೂರೈಕೆ ಮಾಡಲು ಸೂಚನೆ ನೀಡಲಾಗಿದೆ. ಈ ವಲಯದಲ್ಲಿ ಸಾವಿರಾರು ಮಂದಿ ಕೆಲಸಕ್ಕಾಗಿ ಬಂದಿದ್ದು, ಈ ಸಮಯದಲ್ಲಿ ಅವರಿಗೆ ಕುಡಿಯಲು ಬೇಕಾಗಿರುವ ನೀರನ್ನು ನೀಡುವುದು ಅಗತ್ಯವಿದೆ ಎಂದು ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಾಹಿತಿ ನೀಡಿದರು. ದ.ಕ. ಜಿಲ್ಲೆಯ ಗ್ರಾಮೀಣ ಪ್ರದೇಶಗಳಾದ ವಿಟ್ಲ ಭಾಗದಲ್ಲಿ ನೀರಿನ ಸಮಸ್ಯೆ ಕಾಣಿಸಿಕೊಂಡಿದೆ. ಅದಕ್ಕಾಗಿ ಟ್ಯಾಂಕರ್ ವ್ಯವಸ್ಥೆ ಮಾಡಲಾಗಿದೆ. ಉಳಿದಂತೆ ಉಳ್ಳಾಲ ಹಾಗೂ ಮೂಲ್ಕಿ ಭಾಗದಲ್ಲಿ ಮನಪಾ ವತಿಯಿಂದ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 18 ಟ್ಯಾಂಕರ್‌ಗಳಲ್ಲಿ ನೀರು ಪೂರೈಸಲಾಗುತ್ತಿದೆ ಎಂದರು.

LEAVE A REPLY

Please enter your comment!
Please enter your name here