ಮಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಈ ವಾರಾಂತ್ಯದ ಪಂದ್ಯಗಳನ್ನು ಕ್ರಿಕೆಟ್ ಪ್ರೇಮಿಗಳು ಬೃಹತ್ ಪರದೆಯಲ್ಲಿ ವೀಕ್ಷಿಸಬಹುದಾಗಿದೆ. ನಗರದ ಕರಾವಳಿ ಉತ್ಸವ ಮೈದಾನದಲ್ಲಿ ಸಿದ್ಧಗೊಳಿಸಿರುವ ಫ್ಯಾನ್ ಪಾರ್ಕ್‌ನಲ್ಲಿ ಶನಿವಾರದ ಒಂದು ಪಂದ್ಯ ಮತ್ತು ಭಾನುವಾರದ ಎರಡು ಪಂದ್ಯಗಳು ಪ್ರಸಾರಗೊಳ್ಳಲಿವೆ.
‘ಬೃಹತ್ ನಗರಗಳಲ್ಲಿ ಐಪಿಎಲ್ ಪಂದ್ಯಗಳು ನಡೆಯುತ್ತಿವೆ. ಪಂದ್ಯಗಳನ್ನು ಮೈದಾನದಲ್ಲಿ ನೇರವಾಗಿ ವೀಕ್ಷಿಸಲು ಅವಕಾಶ ಇಲ್ಲದ ಪ್ರೇಕ್ಷಕರಿಗಾಗಿ ಎರಡು ಹಾಗೂ ಮೂರನೇ ಹಂತದ ನಗರಗಳಲ್ಲಿ ಫ್ಯಾನ್ ಪಾರ್ಕ್ ವ್ಯವಸ್ಥೆ ಮಾಡಲಾಗಿದೆ. ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಮತ್ತು ಮಧ್ಯ ಭಾರತದ ಐದು ನಗರಗಳಲ್ಲಿ ಪ್ರತಿ ವಾರಾಂತ್ಯದಲ್ಲಿ ಫ್ಯಾನ್ ಪಾರ್ಕ್ ಸಿದ್ಧಗೊಂಡಿರುತ್ತದೆ. ಕರ್ನಾಟಕದಲ್ಲಿ ಮಂಗಳೂರು, ಮೈಸೂರು, ಬೆಳಗಾವಿ, ಹುಬ್ಬಳ್ಳಿ ಮತ್ತು ತುಮಕೂರಿನಲ್ಲಿ ಈ ವ್ಯವಸ್ಥೆ ಮಾಡಲಾಗಿದೆ’ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕ್ರಿಕೆಟ್ ಆಪರೇಷನ್ಸ್ ವಿಭಾಗದ ಸೀನಿಯರ್ ಮ್ಯಾನೇಜರ್ ಸುಮಿತ್ ಮಲ್ಲಾಪುರ್‌ಕರ್ ತಿಳಿಸಿದ್ದಾರೆ.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಫ್ಯಾನ್ ಪಾರ್ಕ್‌ನಲ್ಲಿ 32×18 ಅಡಿಯ ಪರದೆಯಲ್ಲಿ ಪಂದ್ಯಗಳನ್ನು ವೀಕ್ಷಿಸಬಹುದಾಗಿದೆ. ಕುಳಿತುಕೊಳ್ಳಲು ಬೇರೆ ಬೇರೆ ವಿಭಾಗಗಳಲ್ಲಿ ಆಸನಗಳನ್ನು ಸಜ್ಜುಗೊಳಿಸಲಾಗಿದ್ದು ಹಿರಿಯ ನಾಗರಿಕರು ಮತ್ತು ಗರ್ಭಿಣಿಯರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು. ಕಿಡ್ ಜೋನ್ ಪ್ರತ್ಯೇಕ ವಲಯ ಫ್ಯಾನ್ ಪಾರ್ಕ್‌ನಲ್ಲಿ ಇದ್ದು ಆಹಾರ ಮಳಿಗೆಯೂ ಇದೆ. ಮನರಂಜನಾ ಗೇಮ್‌ಗಳಿಗೂ ಅವಕಾಶವಿದೆ. ಉಚಿತ ಪ್ರವೇಶ ಇದ್ದು ಪ್ರವೇಶ ದ್ವಾರದಲ್ಲಿ ನೀಡುವ ಕೂಪನ್‌ನ ಲಕ್ಕಿ ಡ್ರಾ ಮಧ್ಯಂತರ ಅವಧಿಯಲ್ಲಿ ನಡೆಯಲಿದೆ. ಪಂದ್ಯ ಆರಂಭವಾಗುವ ಒಂದು ತಾಸು ಮೊದಲು ಗೇಟ್ ತೆರೆಯಲಾಗುತ್ತದೆ. ಮಧ್ಯಾಹ್ನದ ಪಂದ್ಯ ವೀಕ್ಷಿಸುವ ಸಂದರ್ಭದಲ್ಲಿ ಬಿಸಿಲಿನಿಂದ ರಕ್ಷಣೆ ಪಡೆಯಲು ಛತ್ರಿಗಳನ್ನು ಅಳವಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಮೇ 4, ಸಂಜೆ 7.30: ರಾಯಲ್ ಚಾಲೆಂಜರ್ಸ್ ಬೆಂಗಳೂರು–ಗುಜರಾತ್ ಟೈಟನ್ಸ್, ಮೇ 5, ಮಧ್ಯಾಹ್ನ 3.30: ಪಂಜಾಬ್ ಕಿಂಗ್ಸ್–ಚೆನ್ನೈ ಸೂಪರ್ ಕಿಂಗ್ಸ್, ಮೇ 5, ಸಂಜೆ 7.30: ಲಖನೌ ಸೂಪರ್ ಜೈಂಟ್ಸ್–ಕೋಲ್ಕತ್ತ ನೈಟ್ ರೈಡರ್ಸ್ ಪಂದ್ಯಗಳು ಫ್ಯಾನ್ ಪಾರ್ಕ್‌ನಲ್ಲಿ ಪ್ರಸಾರಗೊಳ್ಳಲಿದೆ.