ಮಂಗಳೂರು: ನಾನು ಬಿಜೆಪಿಗೆ ಜ್ಯೂನಿಯರ್ ಆಗಿದ್ದರೂ ಸಂಘದಲ್ಲಿ 36 ವರ್ಷದಿಂದ ಇದ್ದೇನೆ. ಸಂಘದ ಐಟಿಸಿ, ಓಟಿಸಿ ಆದವನು. ಮೂವತ್ತು ವರ್ಷಗಳ ಹಿಂದೆ ಪುತ್ತೂರಿನಲ್ಲಿ ಓಟಿಸಿ ಆಗಿದೆ. ಮುಖ್ಯ ಶಿಕ್ಷಕನಾಗಿ ನಾನು ಸಂಘದಲ್ಲಿದ್ದು, ಸಂಘದ ಜವಾಬ್ದಾರಿ ಇತ್ತು ಎಂದು ವಿಧಾನ ಪರಿಷತ್ ನ ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಹೇಳಿದ್ದಾರೆ.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ಹರ್ಷಾ ಹತ್ಯೆ ವೇಳೆ ಕಮ್ಯುನಿಸ್ಟರ ಜೊತೆ ಸರ್ಜಿ ಪೌಂಡೇಷನ್ ಶಾಂತಿ ನಡಿಗೆ ಮಾಡಿತ್ತು ಎಂಬ ನೈರುತ್ಯ ಪದವೀಧರ ಕ್ಷೇತ್ರದ ಬಂಡಾಯ ಅಭ್ಯರ್ಥಿ ರಘುಪತಿ ಭಟ್ ಆರೋಪಕ್ಕೆ ಸ್ಪಷ್ಟನೆ ನೀಡಿದ ಅವರು, ಬಸವೇಶ್ವರ ಶಾಖೆಯಲ್ಲಿ ನಾನು ಹತ್ತನೇ ವಯಸ್ಸಿನಿಂದ ರಾಷ್ಟ್ರೀಯ ಸ್ವಯಂ ಸೇವಕನಾಗಿದ್ದವನು. ಹಲವು ವರ್ಷಗಳ ಹಿಂದಿನಿಂದಲೂ ನಾನು ಸಂಘದ ಕಾರ್ಯಕರ್ತ. ಸಂಘಟನೆಯ ವಿಕಾಸ ಟ್ರಸ್ಟ್ ಅಧ್ಯಕ್ಷನಾಗಿ ಕೆಲಸ ಮಾಡ್ತಿದ್ದೆ. ಶಿವಮೊಗ್ಗದ ಹರ್ಷಾ ಮತ್ತು ಕುಟುಂಬ ನನಗೆ ಆಪ್ತರು.ಆವತ್ತು ನಾವು ಎಲ್ಲಾ ಸಂಘ ಸಂಸ್ಥೆಗಳನ್ನು, ಸಂತರನ್ನ ಸೇರಿಸಿ ಶಾಂತಿಯ ನಡಿಗೆ ಮೆರವಣಿಗೆ ಮಾಡಿದ್ದೆವು ಎಂದು ಹೇಳಿದರು.
ಹತ್ತು ವರ್ಷದಿಂದ ಎಲ್ಲಾ ಪೂರ್ಣಾವಧಿ ಕಾರ್ಯಕರ್ತರಿಗೆ ನಮ್ಮ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಇದೆ. ಸಂಘದ ಪೂರ್ಣಾವಧಿ ಕಾರ್ಯಕರ್ತರು ಹಾಗೂ ಬೇರೆ ಕಾರ್ಯಕರ್ತರ ಸಂಪರ್ಕ ನನಗಿದೆ. ನಾನು ಸಂಘ ಮತ್ತು ಪಕ್ಷಕ್ಕಾಗಿ ಹಗಲಿರುಳು ದುಡಿಯುತ್ತೇನೆ.ನನ್ನಲ್ಲಿ ಇರೋದು ಸಂಘಟನೆ ಶಕ್ತಿ, ಆರೋಪಗಳು ಬರುತ್ತದೆ ಹೋಗ್ತದೆ. ಬಿಜೆಪಿಯ ನಿರ್ಧಾರವನ್ನು ಎಲ್ಲಾ ಹಿರಿಯರೂ ಸೇರಿ ಮಾಡ್ತಾರೆ. ಪಕ್ಷದ ಹಿರಿಯರು ಹಾಗೂ ಕೇಂದ್ರದ ಹಿರಿಯರು ನನ್ನ ಆಯ್ಕೆ ಮಾಡಿದ್ದಾರೆ. ಆರ್.ಎಸ್.ಎಸ್ ಕೋಟಾ ಅಥವಾ ಬಿಜೆಪಿ ಕೋಟಾ ಆಯ್ಕೆ ಅನ್ನೋದಕ್ಕಿಂತ ನಾನು ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಎನ್ನುವುದು ಸೂಕ್ತ ಎಂದು ಹೇಳಿದ್ದಾರೆ.