ಶಾಲಾ ಕಾಲೇಜುಗಳ ಆಡಳಿತ ವರ್ಗ ಹಾಗೂ ಶಾಲಾ ವಾಹನಗಳ ಚಾಲಕರುಗಳ ಸಭೆ-ಶಾಲಾ ಕಾಲೇಜು ವಾಹನಗಳಲ್ಲಿ ಪ್ರಯಾಣಿಸುವ ಮಕ್ಕಳ ಸುರಕ್ಷತೆಯ ಬಗ್ಗೆ ಚರ್ಚೆ

ಮಂಗಳೂರು: ಜೂನ್ ತಿಂಗಳ ಮೊದಲನೇ ವಾರದಲ್ಲಿ ಶಾಲಾ ಕಾಲೇಜುಗಳು ಪ್ರಾರಂಭವಾಗಲಿದ್ದು, ಈ ಕುರಿತು ನಗರದ ಎಲ್ಲಾ ಶಾಲಾ ಕಾಲೇಜುಗಳ ಆಡಳಿತ ವರ್ಗ ಹಾಗೂ ಶಾಲಾ ವಾಹನಗಳ ಚಾಲಕರುಗಳ ಸಭೆ, ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಆಗ್ರವಾಲ್ ಅಧ್ಯಕ್ಷತೆಯಲ್ಲಿ ಪೊಲೀಸ್ ಆಯುಕ್ತರ ಕಛೇರಿ ಸಭಾಂಗಣದಲ್ಲಿ ನಡೆಯಿತು.

ಈ ಸಭೆಯಲ್ಲಿ ಶಾಲಾ ವಾಹನಗಳಿಗೆ ಸಂಬಂಧಪಟ್ಟಂತೆ ಕರ್ನಾಟಕ ಮೋಟಾರು ವಾಹನಗಳು(ಶಾಲಾ ಮಕ್ಕಳನ್ನು ಕರೆದ್ಯೊಯ್ಯುವ ವಾಹನಗಳ ಸ್ಥಿತಿಗತಿ) ನಿಯಮಗಳು-2012 ರಲ್ಲಿ ಸೂಚಿಸಿರುವ ನಿಬಂಧನೆಗಳನ್ನು ಶಾಲಾ ಕಾಲೇಜುಗಳ ಮುಖ್ಯಸ್ಥರಿಗೆ ತಿಳಿಸಿ, ಎಲ್ಲಾ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಿ ಪಾಲನಾ ವರದಿ ನೀಡುವಂತೆ ಸೂಚಿಸಲಾಯಿತು. ಅಲ್ಲದೆ, ಶಾಲಾ ಕಾಲೇಜು ವಾಹನಗಳಲ್ಲಿ ಪ್ರಯಾಣಿಸುವ ಮಕ್ಕಳ ಸುರಕ್ಷತೆಯ ಬಗ್ಗೆ ಚರ್ಚಿಸಲಾಯಿತು. ವಿಶೇಷವಾಗಿ ಮಳೆಗಾಲದ ಸಂದರ್ಭದಲ್ಲಿ ಶಾಲಾವಾಹನಗಳನ್ನು ಚಾಲಕರು ಎಲ್ಲೆಂದರಲ್ಲಿ ರಸ್ತೆಗಳಲ್ಲಿ ನಿಲುಗಡೆ ಮಾಡಿ ರಸ್ತೆಯಲ್ಲಿ ಸುಗಮ ವಾಹನ ಸಂಚಾರಕ್ಕೆ ತೊಂದರೆ ಮಾಡದಂತೆ, ರಸ್ತೆಯಲ್ಲಿ ಶಾಲಾ ವಾಹನಗಳನ್ನು ನಿಲ್ಲಿಸಿ ಶಾಲಾ ಮಕ್ಕಳನ್ನು ಇಳಿಸುವುದು/ಹತ್ತಿಸುವುದು ಮಾಡದಂತೆ, ಶಾಲಾವಾಹನಗಳಲ್ಲಿ ನಿಗದಿತ ಪ್ರಮಾಣಕ್ಕಿಂತ ಅಧಿಕ ಮಕ್ಕಳನ್ನು ಸಾಗಿಸದಂತೆ, ವಾಹನಗಳಲ್ಲಿ ಕರ್ಕಶ ಹಾರ್ನ್ ಗಳನ್ನು ಬಳಸದಂತೆ ಹಾಗೂ ನಿಗದಿತ ಎಲ್ಲಾ ಸಂಚಾರ ನಿಯಮಗಳನ್ನು ಪಾಲನೆ ಮಾಡುವಂತೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಲಾಯಿತು. ಈ ಸಭೆಯಲ್ಲಿ ಮಂಗಳೂರು ನಗರದ ಉಪ ಪೊಲೀಸ್ ಆಯುಕ್ತರು ಹಾಗೂ ಸಹಾಯಕ ಪೊಲೀಸ್ ಆಯುಕ್ತರು, ಸಂಚಾರ ಉಪ ವಿಭಾಗ ಹಾಗೂ ಸಂಚಾರ ಠಾಣೆಯ ಪೊಲೀಸ್ ನಿರೀಕ್ಷಕರುಗಳು ಹಾಜರಿದ್ದರು.

LEAVE A REPLY

Please enter your comment!
Please enter your name here