ಮಂಗಳೂರು/ನವದೆಹಲಿ: ಅಕ್ರಮ ನಡೆದಿರುವ ಹಿನ್ನೆಲೆಯಲ್ಲಿ ರದ್ದಾಗಿದ್ದ ಯುಜಿಸಿ – ನೆಟ್ ಜೂ. 2024 ಪರೀಕ್ಷೆಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಹೊಸ ದಿನಾಂಕವನ್ನು ಘೋಷಣೆ ಮಾಡಿದೆ. ಹೊಸ ವೇಳಾಪಟ್ಟಿ ಪ್ರಕಾರ ಅ. 21ರಿಂದ ಸೆ. 4ರ ನಡುವೆ ಪರೀಕ್ಷೆ ನಡೆಯಲಿದೆ.
ಜಂಟಿ ಸಿಎಸ್ಐಆರ್ ಯುಜಿಜಿಸಿ ನೆಟ್ ಹಾಗೂ ಎನ್ಸಿಇಟಿ 2024 ಪರೀಕ್ಷೆಗಳಿಗೂ ಹೊಸ ದಿನಾಂಕಗಳು ಪ್ರಕಟವಾಗಿದ್ದು ಜಾಯಿಂಟ್ ಸಿಎಸ್ಐಆರ್ ಯುಜಿಜಿಸಿ ನೆಟ್ ಪರೀಕ್ಷೆಯನ್ನು ಜು. 25ರಿಂದ ಜು. 27ರವರೆಗೆ ಹಾಗೂ ಎನ್ಸಿಇಟಿ ಪರೀಕ್ಷೆಯನ್ನು ಜು. 10ರಂದು ನಡೆಸಲಾಗುವುದು ಎಂದು ತಿಳಿಸಿದೆ. ಪರೀಕ್ಷೆಯಲ್ಲಿ ಅಕ್ರಮ ತಡೆಗಟ್ಟುವ ನಿಟ್ಟಿನಲ್ಲಿ ಮೂರೂ ಪರೀಕ್ಷೆಗಳು ಕಂಪ್ಯೂಟರ್ ಆಧಾರಿತವಾಗಿ ನಡೆಸಲು ತೀರ್ಮಾನಿಸಲಾಗಿದೆ.
ಈ ಹಿಂದೆ ರದ್ದುಗೊಂಡು ಯುಜಿಸಿ ನೆಟ್ ಜೂ. 2024 ಪರೀಕ್ಷೆಯನ್ನು ಪೆನ್ ಪೇಪರ್ ಮೋಡ್ನಲ್ಲಿ ನಡೆಸಲಾಗಿತ್ತು. ಈ ಬಾರಿ ಪರೀಕ್ಷೆ ಕಂಪ್ಯೂಟರ್ ಆಧಾರಿತ ಪರೀಕ್ಷಾ ಮೋಡ್ನಲ್ಲಿ ನಡೆಯಲಿದೆ. ಅಖಿಲ ಭಾರತ ಆಯುಷ್ ಸ್ನಾತಕೋತ್ತರ ಪ್ರವೇಶ ಪರೀಕ್ಷೆ 2024 ವೇಳಾಪಟ್ಟಿ ಪ್ರಕಾರ, ಜು. 6ರಂದು ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಆಯಾ ಅಭ್ಯರ್ಥಿಗಳು ಎನ್‌ಟಿಎ ಯ ಅಧಿಕೃತ ವೆಬ್ಸೈಟ್ www.nta.ac ಗೆ ಭೇಟಿ ನೀಡಬಹುದು. ಎನ್‌ಟಿಎ ಪರೀಕ್ಷೆಗಳ ಕುರಿತು ಹೆಚ್ಚಿನ ಸ್ಪಷ್ಟೀಕರಣಕ್ಕಾಗಿ, ಅಭ್ಯರ್ಥಿಗಳು 011-40759000 ಅಥವಾ ಆಯಾ ಇ-ಮೇಲ್ ಮೂಲಕ ಸಂಪರ್ಕಿಸಬಹುದು. ಜೂ. 18ರಂದು ದೇಶದ 317 ನಗರಗಳ 1205 ಪರೀಕ್ಷಾ ಕೇಂದ್ರಗಳಲ್ಲಿ ಯುಜಿಸಿ ನೆಟ್ ಪರೀಕ್ಷೆ ನಡೆಸಲಾಗಿತ್ತು. ಪರೀಕ್ಷೆಯಲ್ಲಿ 11 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಭಾಗವಹಿಸಿದ್ದರು. ಆದರೆ ಅಕ್ರಮ ನಡೆದಿದೆ ಎಂಬ ಕಾರಣಕ್ಕಾಗಿ ಪರೀಕ್ಷೆ ನಡೆದ ಮರುದಿನ(ಜೂ. 19) ಕೇಂದ್ರ ಶಿಕ್ಷಣ ಸಚಿವಾಲಯ ಪರೀಕ್ಷೆಯನ್ನು ರದ್ದುಗೊಳಿಸಿತ್ತು.