ಹೊಸದಿಲ್ಲಿ: ಜರ್ಮನಿಯ ವಿದೇಶಾಂಗ ಸಚಿವೆಗೆ ಕೆಂಪು ಹಾಸಿನ ಸ್ವಾಗತ ನೀಡದ ಕುರಿತು ತೀವ್ರ ಸ್ವರೂಪದ ವಿವಾದ ಭುಗಿಲೆದ್ದಿರುವ ಬೆನ್ನಿಗೆ, ಈ ವಾರ ಭಾರತೀಯ ಶಿಷ್ಟಾಚಾರ ಅಸಾಧಾರಣವಾಗಿ ಕಾರ್ಯನಿರ್ವಹಿಸಿದೆ ಎಂದು ಜರ್ಮನಿಯ ರಾಯಭಾರಿ ಫಿಲಿಪ್ ಏಕರ್‌ಮನ್ ಸಮರ್ಥಿಸಿಕೊಂಡಿದ್ದಾರೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ಡಾಟ್ ಕಾಂ ವರದಿ ಮಾಡಿದೆ.
ಮಾರ್ಚ್ 1ರಂದು ಜಿ-20 ವಿದೇಶಾಂಗ ಸಚಿವರ ಸಭೆಯಲ್ಲಿ ಪಾಲ್ಗೊಳ್ಳಲು ಜರ್ಮನಿಯ ವಿದೇಶಾಂಗ ಸಚಿವೆ ಅನ್ನಲೆನಾ ಬೇರ್‌ಬಾಕ್ ಭಾರತಕ್ಕೆ ಆಗಮಿಸಿದ್ದ ವೇಳೆ ಹೊಸದಿಲ್ಲಿಯಲ್ಲಿ ಏಕಾಂಗಿಯಾಗಿ ವಿಮಾನದಿಂದ ಇಳಿಯುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಅವರ ಆಗಮನದ ಸಂದರ್ಭದಲ್ಲಿ ಕೆಂಪು ಹಾಸು ಸ್ವಾಗತವನ್ನು ನೀಡದಿರುವುದು ಹಾಗೂ ಅವರ ಆಗಮನದ ವೇಳೆ ಅಧಿಕಾರಿಗಳು ಹಾಜರಿರದಿರುವುದು ಆ ವಿಡಿಯೊದಲ್ಲಿ ಸೆರೆಯಾಗಿತ್ತು. ಇದರಿಂದ ಇತರ ವಿದೇಶಿ ಗಣ್ಯರಿಗಿಂತ ಜರ್ಮನಿಯ ಸಚಿವೆಯನ್ನು ಕೀಳಾಗಿ ನಡೆಸಿಕೊಳ್ಳಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಬೇರ್‌ಬಾಕ್ ಅವರ ವಿಮಾನ ಅರ್ಧ ಗಂಟೆ ಮುಂಚಿತವಾಗಿ ಭೂಸ್ಪರ್ಶ ಮಾಡಿತು. ಸಚಿವೆಗೆ ಕೆಲ ಸಮಯ ವಿಮಾನದಲ್ಲೇ ಕಾಯುವಂತೆ ಮನವಿ ಮಾಡಲಾಯಿತಾದರೂ, ಅವರು ವಿಮಾನದಿಂದ ಇಳಿಯಲು ನಿರ್ಧರಿಸಿದರು ಎಂದು ಜರ್ಮನಿಯ ರಾಯಭಾರಿ ಏಕರ್‌ಮನ್ ಸ್ಪಷ್ಟಪಡಿಸಿದ್ದಾರೆ.