ಬೆಂಗಳೂರು: ರಾಜ್ಯ ಸರಕಾರವು ಜಾರಿ ತಂದಿರುವ ಅವೈಜ್ಞಾನಿಕ ನೀತಿಗಳನ್ನು ಹಿಂಪಡೆಯದಿದ್ದರೆ ಮಾರ್ಚ್ 17 ರಿಂದ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ಲಾರಿ ಮಾಲಕರ ಮತ್ತು ಏಜೆಂಟರ ಸಂಘ ತಿಳಿಸಿದೆ.
ವಾಹನಗಳಿಗೆ ರೆಟ್ರೋ ರೆಫ್ಲೆಕ್ಟರ್ ಟೇಪ್ ಅಳವಡಿಸುವಂತೆ ಸಾರಿಗೆ ಇಲಾಖೆ ಆದೇಶವನ್ನು ಪಾಲಿಸಲು ವಾಹನ ಮಾಲಕರು ಸಿದ್ದರಿದ್ದಾರೆ. ಆದರೆ ಕ್ಯೂ ಆರ್ ಕೋಡ್ ಆಧಾರಿತ ಟೇಪುಗಳನ್ನು ಸಂಘ ವಿರೋಧಿಸುತ್ತದೆ ಎಂದು ಸಂಘದ ಅಧ್ಯಕ್ಷ ಷಣ್ಮುಗಂ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ. ಬೆಂಗಳೂರು – ಮೈಸೂರು ದಶಪಥ ರಸ್ತೆಯಲ್ಲಿ ಈಗಾಗಲೇ 82 ಮಂದಿ ಅಪಘಾತದಲ್ಲಿ ಸಾವನ್ನಪ್ಪಿದ್ದು ಮಂಡಗತಿಯಲ್ಲಿ ಸಾಗುವ ದ್ವಿಚಕ್ರ, ಆಟೋರಿಕ್ಷಾ, ಟ್ರ್ಯಾಕ್ಟರ್ ಗಳಿಗೆ ಈ ರಸ್ತೆಯಲ್ಲಿ ಅವಕಾಶ ನೀಡಬಾರದು ಎಂದು ಸಂಘ ಒತ್ತಾಯಿಸಿದೆ. ನೈಸ್ ರಸ್ತೆಯಲ್ಲಿ ಕಳೆದ ಹತ್ತು ವರ್ಷಗಳಿಗಿಂತಲೂ ಹೆಚ್ಚಿನ ಅವಧಿಯಿಂದ ಟೋಲ್ ಸಂಗ್ರಹ ಮಾಡುತ್ತಿದ್ದು ಇದನ್ನು ಕೂಡಲೇ ನಿಲ್ಲಿಸಬೇಕು,ಲಾರಿ ಚಾಲಕರಿಗೆ ವಿಶ್ರಾಂತಿ ಕೋಣೆ ನಿರ್ಮಿಸಬೇಕು, ಮಕ್ಕಳಿಗೆ ಆರ್ಥಿಕ ನೆರವು ನೀಡಬೇಕು, ಟೋಲ್ ಸುಂಕವನ್ನು ಸರಕಿನ ಮಾಲಕರು ಪಾವತಿಸಬೇಕು, ಬೆಂಗಳೂರು ನಗರದೊಳಗೆ 6 ಚಕ್ರದ ಲಾರಿಗಳಿಗೆ ಅವಕಾಶ ನೀಡಬೇಕು ಎಂದು ಸಂಘ ಆಗ್ರಹಿಸಿದೆ.