ಮಂಗಳೂರು: ಕಡಿವಾಣವಿಲ್ಲದೇ ಯಮಸ್ವರೂಪಿಯಾಗಿ ಓಡಾಡುವ ಟಿಪ್ಪರ್ ಗೆ ಎರಡು ಅಮಾಯಕ ಜೀವಗಳು ಬಲಿಯಾಗಿದೆ. ನಗರದ ನಂತೂರು ಸರ್ಕಲ್ ನಲ್ಲಿ ಇಂದು(ಮಾ.18) ಮಧ್ಯಾಹ್ನ ವೇಳೆಗೆ ಸಂಭವಿಸಿದ ಭೀಕರ ಅಪಘಾತಕ್ಕೆ ಸ್ಥಳದಲ್ಲಿಯೇ ದ್ವಿಚಕ್ರ ವಾಹನದಲ್ಲಿದ್ದ ಇಬ್ಬರು ಉಸಿರು ಚೆಲ್ಲಿದ್ದಾರೆ.
ನಂತೂರು ಸರ್ಕಲ್ ನ ಸಿಗ್ನಲ್ ನಲ್ಲಿ ನಿಲ್ಲಿಸಿ ಸೂಚನೆಗಾಗಿ ಕಾಯುತ್ತಿದ್ದ ದ್ವಿಚಕ್ರ ವಾಹನದ ಮೇಲೆ ಏಕಾಏಕಿ ನುಗ್ಗಿ ಬಂದ ಲಾರಿ ದ್ವಿಚಕ್ರ ವಾಹನದ ಮೇಲೆ ಹರಿದಿದೆ. ಇದರಿಂದ ದ್ವಿಚಕ್ರದಲ್ಲಿದ್ದ ಇಬ್ಬರು ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ತಂದೆ-ಮಗಳು ಎಂದು ಗುರುತಿಸಲಾಗಿದ್ದು ನತದೃಷ್ಟರ ವಾಹನದಲ್ಲಿ ದೊರಕಿದ ಮಾಹಿತಿಯಂತೆ ಬಲ್ಮಠದ ಸ್ಯಾಮುವೆಲ್ ಜೇಸುದಾಸ್ ಮತ್ತವರ ಪುತ್ರಿ ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.
ಘಟನೆಯಿಂದ ಆಕ್ರೋಶಿತರಾದ ಸಾರ್ವಜನಿಕರು ಅಪಘಾತ ಎಸಗಿದ ಲಾರಿ ಚಾಲಕನಿಗೆ ಧರ್ಮದೇಟು ನೀಡಿದ್ದಾರೆ. ವಾಹನದ ಮೇಲೆ ಕಲ್ಲು ತೂರಾಟ ನಡೆಸಿ ಘಟನೆಯ ಭೀಕರತೆಯ ಹಿನ್ನಲೆಯಲ್ಲಿ ವ್ಯಕ್ತವಾದ ಕೋಪವನ್ನು ತಣಿಸುವ ಪ್ರಯತ್ನ ನಡೆಸಿದ್ದಾರೆ. ಕೆಲಕಾಲ ಘಟನಾಸ್ಥಳದಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣವಾಗಿದೆ. ನಂತೂರು ವೃತ್ತದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂಚಾರಿ ಪೊಲೀಸರು ಲಾರಿ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.