ಮಂಗಳೂರು: ರಾಹುಲ್‌ಗಾಂಧಿ ಮಾ.20 ರಂದು ಬೆಳಗಾವಿಗೆ ಭೇಟಿ ನೀಡಲಿದ್ದು ಯುವ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಇದೇ ವೇಳೆ ರಾಜ್ಯದ ಯುವ ಜನತಗೆ ಕಾಂಗ್ರೆಸ್ ನ ʼಗ್ಯಾರಂಟಿ ಕಾರ್ಡ್ʼ ಯೋಜನೆಯೊಂದನ್ನು ಪ್ರಕಟಿಸುವ ಸಾಧ್ಯತೆ ಇದೆ. ಈ ಕಾರಣದಿಂದ ರಾಜ್ಯ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಮೊದಲ ಹಂತದಲ್ಲಿ 123 ರಿಂದ 125 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿದ್ದರೂ, ಪಟ್ಟಿ ಅಧಿಕೃತವಾಗಿ ಬಿಡುಗಡೆಯಾಗುವುದು ವಿಳಂಬವಾಗಲಿದೆ ಎನ್ನಲಾಗಿದೆ.
ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಸಮ್ಮುಖದಲ್ಲಿ ನಡೆದ ಕೇಂದ್ರ ಚುನಾವಣಾ ಸಮಿತಿಯು 3 ಗಂಟೆಗೂ ಹೆಚ್ಚು ಕಾಲ ಸುದೀರ್ಘ ಸಭೆ ನಡೆಸಿ, ಸ್ಕ್ರೀನಿಂಗ್ ಕಮಿಟಿ ಶಿಫಾರಸು ಮಾಡಿದ್ದ ಅಭ್ಯರ್ಥಿಗಳ ಪಟ್ಟಿ ಕುರಿತು ವ್ಯಾಪಕ ಚರ್ಚೆ ನಡೆಸಿದೆ. 69 ಹಾಲಿ ಶಾಸಕರ ಪೈಕಿ ಐದಾರು ಕ್ಷೇತ್ರಗಳನ್ನು ಹೊರತುಪಡಿಸಿದರೆ ಉಳಿದ ಎಲ್ಲಾ ಹಾಲಿಗಳಿಗೂ ಟಿಕೆಟ್ ಖಾತರಿಯಾಗಿದೆ. ಹೊಸಕೋಟೆ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ, ಮುಳಬಾಗಿಲು ಪಕ್ಷೇತರ ಶಾಸಕ ನಾಗೇಶ್‌ಗೆ ಮಹದೇವಪುರದಿಂದ ಟಿಕೆಟ್ ಖಚಿತಪಡಿಸಲಾಗಿದೆ.ಇದರ ಜತೆಗೆ ಸ್ಕ್ರೀನಿಂಗ್ ಕಮಿಟಿಯಲ್ಲಿ ಒಂದೇ ಅಭ್ಯರ್ಥಿಗಳಿರುವ 60 ರಿಂದ 65 ಕ್ಷೇತ್ರಗಳ ಅಭ್ಯರ್ಥಿಗಳ ಬಗ್ಗೆಯೂ ವ್ಯಾಪಕ ಚರ್ಚೆ ನಡೆಸಿದ ಬಳಿಕ ಪಟ್ಟಿಗೆ ಸಮ್ಮತಿ ನೀಡಲಾಗಿದೆ.
ಉಳಿದ 100 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ಮೊದಲ ಪಟ್ಟಿ ಬಿಡುಗಡೆ ಮಾಡಿದ ಬಳಿಕ ಕೈಗೆತ್ತಿಗೊಳ್ಳಲು ತೀರ್ಮಾನಿಸಲಾಗಿದೆ. ಮಾ.22ರ ಯುಗಾದಿ ಹಬ್ಬದ ದಿನ ಅಥವಾ ನಂತರ ಮೊದಲ ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆಗಳಿವೆ ಎಂದು ಪಕ್ಷದ ಮೂಲಗಳು ತಿಳಿಸಿದೆ.