ಚಂದ್ರಾವತಿ ಸಮಯ ಪ್ರಜ್ಞೆ- ತಪ್ಪಿದ ದುರಂತ

ಮಂಗಳೂರು: ಸಂಭಾವ್ಯ ರೈಲು ಅಪಘಾತವನ್ನು ತಪ್ಪಿಸಿದ  ಚಂದ್ರಾವತಿ ಎಂಬ ಮಹಿಳೆ ಹಲವಾರು ಪ್ರಯಾಣಿಕರ ಪ್ರಾಣವನ್ನು ಉಳಿಸಿದ ಘಟನೆ ಪಡೀಲ್‌ -ಜೋಕಟ್ಟೆ ಮಧ್ಯೆಯ ಪಚ್ಚನಾಡಿ ಸಮೀಪ ಮಂದಾರದಲ್ಲಿ ನಡೆದಿದೆ.  ರೈಲು ಹಳಿ ಮೇಲೆ ಮರ ಬಿದ್ದದ್ದನ್ನು ಗಮನಿಸಿದ 70 ವಯಸ್ಸಿನ ಚಂದ್ರಾವತಿ ಕೆಂಪುಬಟ್ಟೆಯನ್ನು ಪ್ರದರ್ಶಿಸಿ ಸಂಭಾವ್ಯ ರೈಲು ಅಪಘಾತವನ್ನು ತಪ್ಪಿಸಿದ್ದಾರೆ. 

ಮಾ. 21ರಂದು ಮಧ್ಯಾಹ್ನ ಸುಮಾರು 2.10ರ ಸುಮಾರಿಗೆ ರೈಲು ಹಳಿಗೆ ಮರ ಬಿದ್ದಿದ್ದು, ಅದೇ ಸಮಯಕ್ಕೆ ಮಂಗಳೂರಿನಿಂದ ಮುಂಬಯಿಗೆ ಮತ್ಸ್ಯಗಂಧ ರೈಲು ಸಂಚರಿಸುವುದರಲ್ಲಿತ್ತು. ಇದನ್ನು ಗಮನಿಸಿದ ಚಂದ್ರಾವತಿ ಅವರು ಮನೆಯಲ್ಲಿದ್ದ ಕೆಂಪು ವಸ್ತ್ರವನ್ನು ತಂದು ರೈಲು ಬರುವ ಸಮಯಕ್ಕೆ ಪ್ರದರ್ಶಿಸಿ ಲೋಕೋಪೈಲೆಟ್‌ ಗಮನ ಸೆಳೆದಿದ್ದಾರೆ. ಅಪಾಯ ಅರಿತ ಲೋಕೋಪೈಲೆಟ್‌ ರೈಲಿನ ವೇಗವನ್ನು ತಗ್ಗಿಸಿ  ರೈಲನ್ನು ನಿಲ್ಲಿಸಿ  ಸ್ಥಳೀಯರು ಹಾಗೂ ರೈಲ್ವೇ ಇಲಾಖೆಯ ಕೆಲವರು ಸೇರಿ ಮರ ತೆರವುಗೊಳಿಸಿದ್ದಾರೆ.

ಮನೆ ಎದುರಿನ ರೈಲು ಹಳಿಗೆ ಏನೋ ಬಿದ್ದ ಶಬ್ದ ಕೇಳಿತು. ಬಂದು ನೋಡಿದಾಗ ದೊಡ್ಡ ಮರ ಹಳಿಯಲ್ಲಿತ್ತು. ಅದೇ ವೇಳೆಗೆ ಮುಂಬಯಿ ರೈಲು ಸಂಚರಿಸುವುದರಲ್ಲಿತ್ತು. ಏನು ಮಾಡಬೇಕೆಂದು ತಕ್ಷಣಕ್ಕೆ ಗೊತ್ತಾಗಲಿಲ್ಲ. ಯಾರಿಗಾದರೂ ಕರೆ ಮಾಡಿ ತಿಳಿಸುವ ಎಂದು ಮನೆಗೆ ಬಂದೆ. ಅಷ್ಟರಲ್ಲಿ ರೈಲಿನ ಹಾರ್ನ್ ಕೇಳಿಸಿತು. ಅಲ್ಲೇ ಇದ್ದ ಕೆಂಪು ಬಟ್ಟೆ ಹಿಡಿದುಕೊಂಡು ರೈಲ್ವೇ ಹಳಿಯತ್ತ ಓಡಿದೆ.ದೇವರದ ದಯೆಯಿಂದ ಯಾವುದೇ ಅಪಾಯ ಸಂಭವಿಸಲಿಲ್ಲ ಎಂದು ಚಂದ್ರಾವತಿ ಘಟನೆಯ ಬಗ್ಗೆ ಮುಗ್ದವಾಗಿ ಪ್ರತಿಕ್ರಿಯಿಸಿದ್ದಾರೆ. ಚಂದ್ರಾವತಿಯವರಿಗೊಂದು ಸಲಾಂ ಹೇಳಲೇ ಬೇಕು ಏನಂತೀರಿ?.

LEAVE A REPLY

Please enter your comment!
Please enter your name here