ಮಂಗಳೂರು: ವ್ಯಕ್ತಿಯೊಬ್ಬ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು ಮಾಡಿ, ಗುಜರಿ ಅಂಗಡಿಗೆ ಮಾರಾಟ ಮಾಡಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ಪಶ್ಚಿಮ ಬಂಗಾಳ ಮೂಲದ ಸುಬ್ರತೊ ಮಂಡಲ್ ಎಂಬಾತನೇ ಚಿನ್ನ ಕದ್ದು ಗುಜರಿಗೆ ಮಾರಾಟ ಮಾಡಿರುವ ಆರೋಪಿ.
ಆರು ತಿಂಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಸುಬ್ರತೊ ಏನೂ ಕೆಲಸ ಮಾಡದೆ ಕೊಳಾಯಿಗಳನ್ನು ಗುರಿಯಾಗಿಸಿ ಕಳ್ಳತನ ಮಾಡುವ ಹವ್ಯಾಸ ಬೆಳೆಸಿಕೊಂಡಿದ್ದ. ಸುಮಾರು 25ಕ್ಕೂ ಹೆಚ್ಚು ನಳ್ಳಿಗಳನ್ನು ಕದ್ದು ಗುಜರಿಗೆ ಮಾರಾಟ ಮಾಡಿ ಅದರಿಂದ ಬಂದ ಹಣದಲ್ಲಿ ಶೋಕಿ ಮಾಡಿ ಆರಾಮವಾಗಿ ಬೆಂಗಳೂರು ನಗರದಲ್ಲಿ ಬದುಕುತ್ತಿದ್ದ.
ಮಾ.11 ರಂದು ಮತ್ತಿಕೆರೆಯ ಎಚ್‍ಎಂಟಿ ಲೇಔಟ್‍ನಲ್ಲಿರುವ ನಿಜೇಶ್ ಎಂಬುವರ ಮನೆಗೆ ಕನ್ನ ಹಾಕಿದ ಸುಬ್ರತೊ ಯಾರು ಇಲ್ಲದಿರುವುದನ್ನು ಗಮನಿಸಿ ಒಳನುಗ್ಗಿ ಸುಮಾರು 7 ಲಕ್ಷ ರೂ. ಮೌಲ್ಯದ 130 ಗ್ರಾಂ ಚಿನ್ನಾಭರಣವನ್ನು ಕದ್ದಿದ್ದಾನೆ. ಆದರೆ ಅದನ್ನು ಎಲ್ಲಿ ಮಾರಾಟ ಮಾಡಬೇಕೆಂದು ತಿಳಿಯದೆ, ಕೊನೆಗೆ ಗುಜರಿ ಅಂಗಡಿಗೆ 30 ಸಾವಿರ ರೂ. ಗೆ ಮಾರಾಟ ಮಾಡಿದ್ದಾನೆ. ಮನೆ ಮಾಲಕ ನಿಜೇಶ್ ಎಂಬವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಯಶವಂತಪುರ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಗುಜರಿಗೆ ನೀಡಿದ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ.