ಅಂತೆ ಕಂತೆಗಳ ನಡುವೆ ಬಿಜೆಪಿಯ 32 ಹಾಲಿ ಶಾಸಕರಿಗೆ ಟಿಕೆಟ್‌ ಡೌಟ್..?

ಮಂಗಳೂರು: ಬಿಜೆಪಿ ಸಂಸದೀಯ ಮಂಡಳಿ ಮತ್ತು ಚುನಾವಣಾ ಸಮಿತಿ ಸಭೆಗೆ ದಿನಾಂಕ ನಿಗದಿಯಾಗುವುದರೊಂದಿಗೆ ಬಿಜೆಪಿ ಟಿಕೆಟ್‌ ಹಂಚಿಕೆ ಪ್ರಕ್ರಿಯೆ ಒಂದು ಹಂತಕ್ಕೆ ಬಂದು ತಲುಪಿದೆ. ಮೂರರಿಂದ ನಾಲ್ಕು ಸಚಿವರು ಸೇರಿದಂತೆ 32  ಮಂದಿ ಹಾಲಿ ಶಾಸಕರು ಈ ಬಾರಿ ಟಿಕೆಟ್‌ ಕಳೆದುಕೊಳ್ಳುವುದು ಬಹುತೇಕ ಖಚಿತ ಎನ್ನಲಾಗಿದೆ. ಇದರೊಂದಿಗೆ ರಾಜ್ಯದಲ್ಲಿ “ಗುಜರಾತ್‌ ಮಾದರಿ’ಯೊಂದಿಗೆ ಬಿಜೆಪಿ ಚುನಾವಣಾ ಆಖಾಡಕ್ಕೆ ಇಳಿಯಲು ಸಿದ್ದತೆ ನಡೆಸಿದೆ.

ಎಲ್ಲ ಕ್ಷೇತ್ರಗಳಿಗೂ ತಲಾ ಮೂವರು ಸಂಭಾವ್ಯರ ಹೆಸರು ಕೊಡಿ ಎಂದು ವರಿಷ್ಠರು ಸೂಚನೆ ನೀಡಿದಾಗಲೇ ಹಲವು ಶಾಸಕರು ತಮಗೆ ಟಿಕೆಟ್‌ ಕೈ ತಪ್ಪುವುದು ನಿಶ್ಚಿತ ಎಂಬ ನಿರ್ಧಾರಕ್ಕೆ ಬಂದಿದ್ದರು. ಸಂಭಾವ್ಯರ ಪಟ್ಟಿಯಲ್ಲೂ ಕೆಲವರ ಹೆಸರು ಕೈ ಬಿಡುವುದು ಸೂಕ್ತ ಎಂಬ ಅಭಿಪ್ರಾಯವೂ ವ್ಯಕ್ತವಾಗಿತ್ತು. ಒಟ್ಟಾರೆಯಾಗಿ 32 ಹಾಲಿ ಶಾಸಕರು ಅವಕಾಶ ಕಳೆದುಕೊಳ್ಳುವುದು ನಿಚ್ಚಳ ಎನ್ನಲಾಗಿದ್ದು, ಆಡಳಿತ ವಿರೋಧಿ ಅಲೆಯ ವಿರುದ್ಧ ಈಜುವುದಕ್ಕಾಗಿ ಹೊಸಮುಖಗಳನ್ನು ಕಣಕ್ಕಿಳಿಸುವುದು ಪಕ್ಷಕ್ಕೆ ಅನಿವಾರ್ಯವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮೂವರು, ಉಡುಪಿ ಜಿಲ್ಲೆಯ ನಾಲ್ವರು, ಉತ್ತರ ಕನ್ನಡ ಜಿಲ್ಲೆಯ ಇಬ್ಬರು ಹಾಲಿ ಶಾಸಕರಿಗೆ ಟಿಕೆಟ್‌ ಕೈ ತಪ್ಪುವುದು ನಿಶ್ಚಿತ ಎನ್ನಲಾಗಿದೆ. ಇವುಗಳಲ್ಲಿ ಕೆಲ ಘಟಾನುಘಟಿಗಳ ಹೆಸರೂ ಸೇರಿದೆ. ಕಾರ್ಯಕರ್ತರ ವಲಯದಿಂದ ವ್ಯಕ್ತವಾದ ಬಲವಾದ ವಿರೋಧವೇ ಈ ಬದಲಾವಣೆಗೆ ಕಾರಣ ಎನ್ನಲಾಗಿದೆ. ಕಳೆದ ಚುನಾವಣೆ ಸಂದರ್ಭದಲ್ಲಿ ಬದಲಾವಣೆಗೆ ಸಾಕ್ಷಿಯಾಗಿದ್ದ ಕರಾವಳಿಯ 3 ಜಿಲ್ಲೆಗಳಲ್ಲಿ 9 ಹಾಲಿ ಶಾಸಕರಿಗೆ ಟಿಕೆಟ್‌ ನಿರಾಕರಣೆ ಖಚಿತವಾಗಿದೆ. ಸಂಭಾವ್ಯ ಶಾಸಕರ ಪಟ್ಟಿ ಈಗಾಗಲೇ ವರಿಷ್ಠರ ಕೈಸೇರಿದೆ ಎನ್ನಲಾಗಿದೆ. 

LEAVE A REPLY

Please enter your comment!
Please enter your name here