ಮಂಗಳೂರು: ಕಾಂಗ್ರೆಸ್ ಪಕ್ಷ ಬಾಕಿ ಉಳಿದಿರುವ 58 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಪಟ್ಟಿ ಬಿಡುಗಡೆಯ ನಂತರದಲ್ಲಾದ ಬೆಳವಣಿಗಯನ್ನು ಗಮನಿಸಿ ಬಿಡುಗಡೆ ಮಾಡಲು ಚಿಂತಿಸಿದೆ. ಸೋಮವಾರ ಹಾಗೂ ಮಂಗಳವಾರ ಹೊಸದಿಲ್ಲಿಯಲ್ಲಿ ನಡೆದ ಕಾಂಗ್ರೆಸ್ ನಾಯಕರ ಸರಣಿ ಸಭೆ ಬಳಿಕ ಈ ತೀರ್ಮಾನಕ್ಕೆ ಬರಲಾಗಿದೆ.
ಬಾಕಿ 58 ಕ್ಷೇತ್ರಗಳ ಪೈಕಿ ಬಹುತೇಕ 30 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲಾಗಿದೆ. ತೀವ್ರ ಸಮಸ್ಯೆಯಾಗಿರುವ 28 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಕೊನೆಘಳಿಗೆಯಲ್ಲಿ ಬಿಡುಗಡೆ ಮಾಡುವ ಸಾಧ್ಯತೆಗಳಿವೆ. ಉಳಿದ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುವುದಕ್ಕೆ ಹೈಕಮಾಂಡ್ ಸೂಚನೆ ಮೇರೆಗೆ ಹೊಸದಿಲ್ಲಿಗೆ ತೆರಳಿದ್ದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ತಮ್ಮ ಅಭಿಪ್ರಾಯಗಳನ್ನು ತಿಳಿಸಿದ ಬಳಿಕ 30 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಒಮ್ಮತದಿಂದ ಅಂತಿಮಗೊಳಿಸಲಾಗಿದೆ. ಆದರೆ ಐದು ಕ್ಷೇತ್ರಗಳ ಟಿಕೆಟ್ ವಿಷಯದಲ್ಲಿ ಮಾತ್ರ ಡಿ ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವೆ ಒಮ್ಮತ ಮೂಡದ ಕಾರಣ ಆಯ್ಕೆ ವಿಚಾರ ಮತ್ತೆ ಮುಂದೂಡಲ್ಪಟ್ಟಿದೆ.