ಮಂಗಳೂರು:189 ಅಭ್ಯರ್ಥಿಗಳ ಬಿಜೆಪಿ ಮೊದಲ ಪಟ್ಟಿ ಬಿಡುಗಡೆಯ ಬೆನ್ನಿಗೆ ಪಕ್ಷದಲ್ಲಿ ರಾಜಕೀಯ ಬೆಳವಣಿಗೆಯ ಸರಣಿ ಆರಂಭವಾಗಿದೆ. ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಟಿಕೆಟ್ ವಂಚಿತರಾದ ಜಗದೀಶ್ ಶೆಟ್ಟರ್ ಇದೇ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಹೇಳುವ ಮೂಲಕ ಪಕ್ಷಕ್ಕೆ ಸೆಡ್ಡು ಹೊಡೆದಿದ್ದಾರೆ.
ಅಥಣಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಲಕ್ಷ್ಮಣ ಸವದಿ ಪಕ್ಷಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದು, ಇಂದು ಕಾರ್ಯಕರ್ತರ ಸಭೆ ಆಯೋಜಿಸಿದ್ದಾರೆ. ಉಡುಪಿ ಟಿಕೆಟ್ ವಂಚಿತ ರಘುಪತಿ ಭಟ್ ಪಕ್ಷೇತರವಾಗಿ ಸ್ಪರ್ಧಿಸುವುದಾಗಿ ಹೇಳಿಲ್ಲ ಎಂದು ಹೇಳಿದರಾದರೂ ಪಕ್ಷದ ನಿಲುವಿನ ಬಗ್ಗೆ ಬೇಸರ ವ್ಯಕ್ತ ಪಡಿಸಿದ್ದಾರೆ.
ವಿಧಾನ ಪರಿಷತ್ ಸದಸ್ಯ ಆರ್ ಶಂಕರ್ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಶಿವಮೊಗ್ಗದಲ್ಲಿ ಈಶ್ವರಪ್ಪ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದು, ಇಂದು ಸುಳ್ಯದಲ್ಲಿ ಎಸ್ ಅಂಗಾರ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದಾರೆ.
ಪಕ್ಷದ ಹಿರಿಯ ನಾಯಕ ಆರ್ ಅಶೋಕ್ ಅವರಿಗೆ ಪದ್ಮನಾಭ ನಗರ ಮತ್ತು ಕನಕಪುರದಿಂದ ಟಿಕೆಟ್ ನೀಡಲಾಗಿದ್ದು ವಿ ಸೋಮಣ್ಣ ಅವರಿಗೆ ವರುಣ ಮತ್ತು ಚಾಮರಾಜ ನಗರದಿಂದ ಟಿಕೆಟ್ ನೀಡಲಾಗಿದೆ. ಆರ್ ಅಶೋಕ್ ಅವರನ್ನು ಡಿ ಕೆ ಶಿ ವಿರುದ್ದ ಮತ್ತು ಸೋಮಣ್ಣ ಅವರನ್ನು ಸಿದ್ದರಾಮಯ್ಯ ವಿರುದ್ದ ಎತ್ತಿಕಟ್ಟಲಾಗಿದೆ.
ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಪಕ್ಷದ ಕೆಲ ನಾಯಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನುಳಿದಂತೆ ಹಾಲಿ ಶಾಸಕರಾದ ಸಂಜೀವ ಮಠಂದೂರು, ಲಾಲಾಜಿ ಮೆಂಡನ್ , ಗೂಳಿಹಟ್ಟಿ ಶೇಖರ್, ಅನಿಲ್ ಬೆನಕ, ಮಹದೇವಪ್ಪ ಯಾದವಾಡ, ರಾಮಪ್ಪ ಲಮಾಣಿ ಮುಂತಾದವರಿಗೆ ಟಿಕೆಟ್ ಕೈ ತಪ್ಪಿದ್ದು, ಇವರೆಲ್ಲರ ಬಂಡಾಯವನ್ನು ಬಿಜೆಪಿ ಹೇಗೆ ಸರಿ ಪಡಿಸುತ್ತದೆ ಎಂಬುವುದು ಕುತೂಹಲ ಮೂಡಿಸಿದೆ.
ಪುತ್ತೂರಿನಲ್ಲಿ ಟಿಕೆಟ್ ವಂಚಿತ ಅರುಣ್ ಕುಮಾರ್ ಪುತ್ತಿಲ ಇಂದು ಅಭಿಮಾನಿ ಕಾರ್ಯಕರ್ತರ ಸಭೆ ಕರೆದಿದ್ದು ಸಭೆಯ ಬಳಿಕ ನಿರ್ಧಾರ ಪ್ರಕಟಿಸುವುದಾಗಿ ಹೇಳಿದ್ದಾರೆ.