ಮಂಗಳೂರು: ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ 14 ದಿನದ ಮಗುವಿನ ಹೊಟ್ಟೆಯಿಂದ 3 ಭ್ರೂಣಗಳನ್ನು ಹೊರತೆಗೆದ ಅಪರೂಪದ ಘಟನೆಯೊಂದು ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆದಿದೆ.
ಏಳು ವೈದ್ಯರ ತಂಡವು ಮೂರು ಗಂಟೆಗಳ ಶಸ್ತ್ರ ಚಿಕಿತ್ಸೆ ಬಳಿಕ ಮಗುವಿನ ಉದರದಲ್ಲಿದ್ದ ಭ್ರೂಣವನ್ನು ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ವೈದ್ಯರು ನೀಡಿರುವ ಮಾಹಿತಿಯಂತೆ ಶಸ್ತ್ರ ಚಿಕಿತ್ಸೆಗೆ ಮೊದಲು 3.3 ಕೆಜಿಯಷ್ಟಿದ್ದ ಮಗುವಿನ ತೂಕ ಶಸ್ತ್ರಚಿಕಿತ್ಸೆಯ ಬಳಿಕ 2.8 ಕೆಜಿಗೆ ಇಳಿದಿದೆ. ಮೌ ಜಿಲ್ಲೆಯವರಾದ ದಂಪತಿಗಳು ಊತ ಮತ್ತು ಉಸಿರಾಟದ ತೊಂದರೆಯಿರುವ ತಮ್ಮ 10 ದಿನದ ಮಗುವಿನೊಂದಿಗೆ ಆಸ್ಪತ್ರೆಗೆ ಬಂದಿದ್ದರು. ಅಲ್ಟ್ರಾಸೌಂಡ್ ಮಾಡಿದಾಗ ಹೊಟ್ಟೆಯಲ್ಲಿ ಭ್ರೂಣ ಪತ್ತೆಯಾಗಿದೆ. ಸಿ ಟಿ ಸ್ಕ್ಯಾನ್ ಮೂಲಕ ಇದನ್ನು ದೃಢಪಡಿಸಿಕೊಂಡು ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. 5 ಲಕ್ಷ ಶಿಶುಗಳಲ್ಲಿ 1 ಮಗುವಿಗೆ ಇಂತಹ ಸಮಸ್ಯೆ ಕಂಡುಬರುತ್ತದೆ. ತಾಯಿ ಗರ್ಭಾವಸ್ಥೆಯಲ್ಲಿರುವಾಗ ಭ್ರೂಣವು ಮಗುವಿನ ಹೊಟ್ಟೆಗೆ ಬರುತ್ತದೆ,ಆದರೆ ಅದು ಬೆಳೆಯುವುದಿಲ್ಲ ಎಂದು ಬಿ ಎಚ್ ಯು ನ ಡಾ.ಶೇಟ್ ಕಶಪ್ ತಿಳಿಸಿದ್ದಾರೆ.