ಮಂಗಳೂರು : 6.5 ಲಕ್ಷಕ್ಕೂ ಹೆಚ್ಚು ವಿವಿಪ್ಯಾಟ್ ಯಂತ್ರಗಳು ದೋಷಯುಕ್ತವಾಗಿವೆ ಎಂದು ಚುನಾವಣಾ ಆಯೋಗವು ಬೆಟ್ಟು ಮಾಡಿದೆ ಎಂಬ ಮಾಹಿತಿ ತನಗೆ ಲಭ್ಯವಿರುವುದಾಗಿ ಸುದ್ದಿ ಜಾಲತಾಣ ದಿ ವೈರ್ ವರದಿಯಲ್ಲಿ ಉಲ್ಲೇಖಿಸಿದೆ.
ಈ ಯಂತ್ರಗಳನ್ನು ಈಗ ದುರಸ್ತಿಗಾಗಿ ತಯಾರಕರಿಗೆ ಮರಳಿಸಲಾಗುತ್ತಿದೆ. ಇವು 2018ರಲ್ಲಿ ಮೊದಲ ಬಾರಿಗೆ ಪರಿಚಯಿಸಲಾಗಿದ್ದ ಎಂ 3 ಪೀಳಿಗೆಯ ನವೀನ ಯಂತ್ರಗಳಾಗಿವೆ ಎನ್ನುವುದು ಪ್ರಮುಖ ವಿಷಯ. 2019ರ ಲೋಕಸಭಾ ಚುನಾವಣೆಯಲ್ಲಿ ಮತ್ತು ನಂತರ ನಡೆದ ವಿಧಾನಸಭಾ ಚುನಾವಣೆಗಳಿಗಾಗಿ ಒಟ್ಟು 17.4 ಲಕ್ಷ ವಿವಿಪ್ಯಾಟ್ ಯಂತ್ರಗಳ ಬಳಕೆ ಮಾಡಲಾಗಿತ್ತು. ಈ ಪೈಕಿ ಶೇಕಡ 37 ರಷ್ಟು ಯಂತ್ರಗಳು ದೋಷಯುಕ್ತವಾಗಿವೆ ಎನ್ನುವುದನ್ನು ಈಗ ಆಯೋಗವು ಕಂಡುಕೊಂಡಿದೆ. ಹೆಚ್ಚಿನ ಸಂಖ್ಯೆಯಲ್ಲಿ ದೋಷಪೂರಿತ ಯಂತ್ರಗಳ ಬಗ್ಗೆ ತಜ್ಞರು ಎಚ್ಚರಿಕೆಯ ಗಂಟೆಯನ್ನು ಮೊಳಗಿಸಿದ್ದಾರೆ. 6.5 ಲಕ್ಷಕ್ಕೂ ಅಧಿಕ ವಿವಿಪ್ಯಾಟ್ ಯಂತ್ರಗಳು ದೋಷಯುಕ್ತವಾಗಿವೆ ಎಂದು ನೀವು ಹೇಳುತ್ತಿರುವುದು ನಿಜವಾಗಿದ್ದರೆ ಅದು ಅತ್ಯಂತ ಗಂಭೀರ ವಿಷಯವಾಗಿದೆ ಎಂದು ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್ ವೈ ಖುರೇಷಿ ಹೇಳಿದ್ದಾರೆ. ಇವಿಎಂಗಳು ಮತ್ತು ವಿವಿಪ್ಯಾಟ್ ಗಳ ಸದೃಢತೆ ಮತ್ತು ದಕ್ಷತೆಯನ್ನು ತಯಾರಕರು ಮತ್ತು ಚುನಾವಣಾ ಆಯೋಗ ಸಮರ್ಥಿಸಿ ಕೊಂಡಿವೆ. ತಾತ್ವಿಕವಾಗಿ ಈ ಯಂತ್ರಗಳನ್ನು ಪರೀಕ್ಷಿಸಲು ವಿವಿಧ ತಜ್ಞರಿಗೆ ಒಪ್ಪಿಸಬೇಕು. ಪಾರದರ್ಶಕತೆಯ ಕೊರತೆ ಮತ್ತು ಗೌಪ್ಯತೆಯ ಮುಸುಕು ಸಮಸ್ಯೆಯಾಗಿದೆ ಎಂದು ಕಾನ್ಪುರದ ಕಂಪ್ಯೂಟರ್ ವಿಜ್ಞಾನ ಪ್ರೊಫೆಸರ್ ಸಂದೀಪ್ ಶುಕ್ಲ ಹೇಳಿದ್ದಾರೆ.