ಅಕ್ರಮ ಜಾನುವಾರು ಸಾಗಾಟ – ನಾಲ್ವರ ಬಂಧನ

ಮಂಗಳೂರು : ಮಿನಿ ಗೂಡ್ಸ್ ವಾಹನವೊಂದರಲ್ಲಿ ಹಸುಗಳನ್ನು ಕಸಾಯಿಖಾನೆಗೆ ಸಾಗಿಸುತ್ತಿದ್ದ ವೇಳೆ ವಾಹನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ನಾಲ್ವರು ಗೋ ಸಾಗಾಟ ಮಾಡುತ್ತಿದ್ದ ವ್ಯಕ್ತಿಗಳು ಬಂಧನಕ್ಕೆ ಒಳಗಾದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಅಮಲಮೊಗ್ರು ಎಂಬಲ್ಲಿ ವೃದ್ದೆಯೊಬ್ಬರಿಂದ ಆರೋಪಿಗಳು ನಾಲ್ಕು ಹಸುಗಳನ್ನು ಖರೀದಿಸಿ ಗೂಡ್ಸ್ ವಾಹನದಲ್ಲಿ ಉಳ್ಳಾಲದ ಅಲೆಕ್ಕಳ ಕಸಾಯಿಖಾನೆಗೆ ಸಾಗಿಸುತ್ತಿದ್ದ ವೇಳೆ ವಾಹನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಚಲಿಸಲು ಸಾಧ್ಯವಾಗದೆ ನಿಂತಿದೆ. ಈ ವೇಳೆ ಗೂಡ್ಸ್ ವಾಹನವನ್ನು ಬೈಕ್ ನಲ್ಲಿ ಹಿಂಬಾಲಿಸುತ್ತಿದ್ದ ವ್ಯಕ್ತಿ ಸೇರಿದಂತೆ, ಗೂಡ್ಸ್ ವಾಹನದಲ್ಲಿದ್ದ ಇಬ್ಬರು ಸೇರಿ ವಾಹನವನ್ನು ತಳ್ಳಲು ಮುಂದಾಗಿದ್ದಾರೆ. ಸ್ಥಳದಲ್ಲಿದ್ದ ಸ್ಥಳೀಯರು ವಾಹನವನ್ನು ತಳ್ಳುವ ಮೂಲಕ ಸಹಾಯ ಹಸ್ತ ಚಾಚಿದ್ದಾರೆ. ವಾಹನದಲ್ಲಿ ಹಸುಗಳನ್ನು ಆಕ್ಷೇಪಾರ್ಹ ರೀತಿಯಲ್ಲಿ ಕಟ್ಟಿ ಟರ್ಪಲ್ ಹಾಕಿರುವುದನ್ನು ಗಮನಿಸಿದ ಸ್ಥಳೀಯರು ಆರೋಪಿಗಳ ಬಳಿ ಎಲ್ಲಿಂದ ಖರೀದಿಸಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಆರೋಪಿಗಳು ವಾಹನ, ನಾಲ್ಕು ಹಸು ಮತ್ತು ದ್ವಿಚಕ್ರ ವಾಹನವನ್ನು ಬಿಟ್ಟು ಓಡಿ ಹೋಗಿದ್ದಾರೆ. ಈ ಕುರಿತು ಸ್ಥಳೀಯ ನಿವಾಸಿ ಶರತ್ ಕುಮಾರ್ ನೀಡಿದ ದೂರಿನ ಮೇರೆಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಗೋಹತ್ಯೆ ಕಾಯ್ದೆ, ಪ್ರಾಣಿಹಿಂಸೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಕಲ್ಲಾಪು ಬಳಿ ನಾಲ್ವರು ಆರೋಪಿಗಳನ್ನು ಕಳೆದ ರಾತ್ರಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಬಂಗ್ರ ಮಂಜೇಶ್ವರದ ಖಾಲಿದ್‌, ಬಸ್ತಿಪಡ್ಪುವಿನ ಫಯಾಝ್‌, ಅಲೇಕ್ಕಳದ ಜಾಫರ್‌ ಸಾದಿಕ್‌ , ಉಳ್ಳಾಲದ ಅಹಮ್ಮದ್‌ ಇರ್ಷಾದ್‌ ಎಂದು ಗುರುತಿಸಲಾಗಿದೆ. ತನಿಖೆ ಮುಂದುವರೆದಿದೆ.

LEAVE A REPLY

Please enter your comment!
Please enter your name here