ಮೂರು ತಿಂಗಳಾದರೂ ಪಾವತಿಯಾಗದ ಮೋದಿಯ ಚುನಾವಣಾ ಪ್ರಚಾರಕ್ಕೆ ಬಳಸಿದ ಬಸ್ಸಿನ ಹಣ-ಕಾಂಗ್ರೆಸ್ ಸರಕಾರಕ್ಕೆ ಮನವಿ ಸಲ್ಲಿಸಿದ ಬಸ್ ಮಾಲಕರು

ಮಂಗಳೂರು: ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಭಾಗವಹಿಸಿದ್ದ ಕಾರ್ಯಕ್ರಮಕ್ಕೆ ಜನರನ್ನು ಕರೆತಂದಿದ್ದ ಖಾಸಗಿ ಬಸ್ಸುಗಳಿಗೆ ಇನ್ನೂ ಹಣ ಪಾವತಿಸಿಲ್ಲ ಎಂಬ ದೂರುಗಳು ಕೇಳಿ ಬಂದಿದೆ.

ತನ್ನ ಅವಧಿಯಲ್ಲಿ ಮಾಡಿದ ಅವಾಂತರವನ್ನು ಕಾಂಗ್ರೆಸ್ ತಲೆಗೆ ಕಟ್ಟುವುದು ಬಿಜೆಪಿಗೆ ಖಯಾಲಿಯಾಗಿದೆ. ಮೋದಿಯ ಚುನಾವಣಾ ಪ್ರಚಾರಕ್ಕೆ ಬಸ್ ಬಳಸಿಕೊಂಡು ಹಣ ನೀಡದೆ ಹೋಗಿದ್ದೇಕೆ? ಯಾರು ಹಣ ಪಾವತಿಸುವಿರಿ? ಮೋದಿಯೋ, ಬೊಮ್ಮಾಯಿಯೋ ? ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

ಶಿವಮೊಗ್ಗ ಜಿಲ್ಲೆಯ ಸೋಗಾನೆಯಲ್ಲಿ ನೂತನ ವಿಮಾನ ನಿಲ್ದಾಣ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಬಂದು ಹೋಗಿ ಮೂರು ತಿಂಗಳು ಕಳೆದರೂ ಕಾರ್ಯಕ್ರಮಕ್ಕೆ ಜನರನ್ನು ಕರೆತಂದಿದ್ದ ಖಾಸಗಿ ಬಸ್ ಗಳ ಮಾಲೀಕರಿಗೆ ಜಿಲ್ಲಾಡಳಿತ ಇನ್ನೂ ಹಣ ಪಾವತಿಸಿಲ್ಲ.

ಬಿಎಸ್ ಯಡಿಯೂರಪ್ಪ ಅವರ ಜನ್ಮದಿನದ ಅಂಗವಾಗಿ ಫೆಬ್ರವರಿ 27ರಂದು ನಡೆದಿದ್ದ ಕಾರ್ಯಕ್ರಮಕ್ಕೆ 58 ಸಿಟಿ ಬಸ್, 14 ಶಾಲಾ ಬಸ್ ಸೇರಿ ಒಟ್ಟು 301 ಖಾಸಗಿ ಬಸ್ಸುಗಳಲ್ಲಿ ಜನರನ್ನು ಕರೆತರಲಾಗಿತ್ತು. ಪ್ರತಿ ಕಿಲೋಮೀಟರ್ ಗೆ 43 ರೂಪಾಯಿಯಂತೆ 300 ಕಿಲೋಮೀಟರ್ ಲೆಕ್ಕದಲ್ಲಿ ಹಣ ಪಾವತಿಸಬೇಕಿದೆ ಎಂದು ಜಿಲ್ಲಾಡಳಿತಕ್ಕೆ ಪಟ್ಟಿ ನೀಡಲಾಗಿದೆ ಎಂದು ರಾಜ್ಯದ ಪ್ರಮುಖ ಪತ್ರಿಕೆ ಪ್ರಜಾವಾಣಿ ತನ್ನ ಸುದ್ದಿಜಾಲದಲ್ಲಿ ಪ್ರಕಟಿಸಿದೆ.

ಇದೇ ಕಾರ್ಯಕ್ರಮಕ್ಕೆ ಜನರನ್ನು ಕರೆತರಲು ಬಳಕೆಯಾಗಿದ್ದ ಸಾವಿರದ ಇನ್ನೂರಕ್ಕೂ ಹೆಚ್ಚು ಕೆಎಸ್ಆರ್‌ಟಿಸಿ ಬಸ್ಸುಗಳಿಗೆ ಜಿಲ್ಲಾಡಳಿತ ಹಣ ಪಾವತಿಸಿ ಎರಡು ತಿಂಗಳಾದರೂ ಖಾಸಗಿ ಬಸ್ಸುಗಳ ಬಿಲ್ ಪಾವತಿಸಿಲ್ಲ. ಹೊಸ ಸರ್ಕಾರ ಬಂದಿದೆ ಈಗಲಾದರೂ ಹಣ ಕೊಡುತ್ತಾರೋ ಇಲ್ಲವೋ ನೋಡಬೇಕು ಎಂದು ಖಾಸಗಿ ಬಸ್ ಮಾಲೀಕರು ಅಳಲು ತೋಡಿಕೊಂಡಿದ್ದಾರೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here