ಮಂಗಳೂರು: ರಾಜ್ಯದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರಕಾರ ಅಕ್ಕಿ ನೀಡಬೇಕು ಎಂದು ಅಗ್ರಹಿಸಿ ಮಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಅನ್ನದ ಬಟ್ಟಲು ತಟ್ಟಿ ಪ್ರತಿಭಟನೆ ನಡೆಸಿದರು.
ಮಂಗಳೂರಿನ ಆಡಳಿತ ಸೌಧದ ಮುಂಬಾಗ ಮಾಜಿ ಸಚಿವ ಬಿ ರಮಾನಾಥ ರೈ ಹಾಗೂ ಮಾಜಿ ಶಾಸಕ ಜೆ ಅರ್ ಲೋಬೊ ನೇತ್ರತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ ನಡೆಯಿತು. ಭಾರತೀಯ ಆಹಾರ ನಿಗಮವು ಅಕ್ಕಿ ಕೊಡುವುದಾಗಿ ಒಪ್ಪಿಕೊಂಡು ಬಳಿಕ ಮೋದಿ ಸರಕಾರದ ಒತ್ತಡದಿಂದ ಅಕ್ಕಿ ಪೂರೈಕೆಗೆ ನಿರಾಕರಿಸಿದೆಯೆಂದು ಪ್ರತಿಭಟನಕಾರರು ಆರೋಪಿಸಿದರು. ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಮಾಜಿ ಸಚಿವ ಬಿ.ರಮಾನಾಥ ರೈ ಬಿಜೆಪಿ ಚುನಾವಣೆಗೆ ಮೊದಲು ಆಶ್ವಾಸನೆ ನೀಡುತ್ತದೆ. ಆದರೆ ಚುನಾವಣೆ ಬಳಿಕ ಅದನ್ನು ಈಡೇರಿಸುವುದಿಲ್ಲ. ಬಿಜೆಪಿಯವರು ಯಾವ ಮುಖ ಇಟ್ಟುಕೊಂಡು ಜನರ ಬಳಿ ಹೋಗುತ್ತಾರೆ. ಬಿಜೆಪಿ ಯವರು ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ಕಟುವಾಗಿ ಟೀಕಿಸಿದ್ದಾರೆ.
ಕೆಲ ವರ್ಷಗಳ ಹಿಂದೆ ನನ್ನ ವಿರುದ್ಧ ಷಡ್ಯಂತ್ರ ಮಾಡಿ, ಮಕ್ಕಳ ಕೈಯಿಂದ ತಟ್ಟೆ ಬಡಿದು ನನ್ನ ವಿರುದ್ದ ಪ್ರತಿಭಟನೆಯನ್ನು ಮಾಡಿಸಿದ್ದರು. ಅಂದು ನಾನು ನಿಜವಾಗಿಯೂ ಒಂದು ಮುಷ್ಠಿ ಅಕ್ಕಿಯನ್ನು ತಡೆ ಹಿಡಿದಿರಲಿಲ್ಲ. ಕೊಲ್ಲೂರು ದೇವಸ್ಥಾನದಿಂದ ಕಲ್ಲಡ್ಕ ಶಾಲೆಗೆ ಚೆಕ್ ಮೂಲಕ ತಿಂಗಳು ತಿಂಗಳು ಬರುತ್ತಿದ್ದ ನಾಲ್ಕು ಲಕ್ಷ ರೂಪಾಯಿಯನ್ನು ನಿಲ್ಲಿಸಿದ್ದೆ. ದೇಗುಲದಿಂದ ಶಾಲೆಗೆ ಮಾತ್ರ ಬರುತ್ತಿದ್ದ ಹಣ ಎಲ್ಲಿಗೆ ಹೋಗುತ್ತೆ? ಹೇಗೆ ಖರ್ಚು ಆಗುತ್ತದೆ, ಕಾರ್ಯಕ್ರಮಗಳೇನು ಎಂಬುವುದು ಯಾರಿಗೂ ಗೊತ್ತಿಲ್ಲ. ದೇವಸ್ಥಾನದ ಹಣವನ್ನು ತಿನ್ನಲು ಆಯೋಗ್ಯರಿಗೆ ನಾನು ಬಿಟ್ಟಿಲ್ಲ. ಆದರೇ ಅದನ್ನೆ ಬಳಸಿಕೊಂಡು ಅವರು ಚುನಾವಣೆ ಗೆದ್ದರು ಎಂದು ಆವೇಶದಿಂದ ಹೇಳಿದರು.
ಕಾಂಗ್ರೆಸ್ ದುರ್ಬಲ ವರ್ಗದ ಪರವಾಗಿರುವ ಪಕ್ಷ. ಬಡವರಿಗೆ ಅಕ್ಕಿ ಕೊಡುವ ಯೋಜನೆಯನ್ನು ಮೊದಲು ಜಾರಿಗೆ ತಂದಿದ್ದು ಸಿದ್ದರಾಮಯ್ಯನವರ ಸರಕಾರ. ಅವರು ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಈ ಯೋಜನೆ ಜಾರಿಗೆ ತಂದರು. ಇದೀಗ ಮತ್ತೆ ಎರಡನೇ ಬಾರಿ ಅಧಿಕಾರಕ್ಕೆ ಬಂದಿರುವ ಸಂದರ್ಭ ಅದನ್ನು ಮರು ಜಾರಿ ಮಾಡುತ್ತಿದ್ದಾರೆ. ಆದರೇ ಈಗ ಈ ಅನ್ನಭಾಗ್ಯ ಯೋಜನೆಗೆ ಬಿಜೆಪಿ ಅಡ್ಡಿ ಪಡಿಸುತ್ತಿದೆ ಅದಕ್ಕಾಗಿ ಬಡವರಿಗೆ ಸೇರಬೇಕಾದ ಅಕ್ಕಿ ಕೊಡದ ಬಿಜೆಪಿಯ ವಿರುದ್ಧ ಇವತ್ತು ನಾವು ತಟ್ಟೆ ಹಿಡಿದು ಪ್ರತಿಭಟನೆ ಮಾಡುತ್ತಿದ್ದೇವೆ ಎಂದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಮಹಿಳಾ ಘಟಕದ ಕಾರ್ಯದರ್ಶಿ ಮಮತಾ ಗಟ್ಟಿ ಮಾತನಾಡಿ “ ಶೋಭಕ್ಕ ಎಲ್ಲಿ ಹೋದ್ರಿ? ಆಗ ಬಂಟ್ವಾಳದಲ್ಲಿ ಜೋಳಿಗೆ ಹಿಡಿದು ಅಕ್ಕಿ ಕೇಳಿದ್ರಲ್ಲ. ಈಗ ಎಲ್ಲಿ ಹೋದ್ರಿ ಎಂದು ಪ್ರಶ್ನಿಸುವ ಮೂಲಕ ವ್ಯಂಗ್ಯವಾಡಿದರು.
ಕಾಂಗ್ರೆಸ್ ನ ಜಿಲ್ಲಾ ಪದಾಧಿಕಾರಿಗಳು, ಮುಂಚೂಣೆ ನಾಯಕರು, ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.