ಮಂಗಳೂರು: ಮೀರತ್ ನ ಲಾಲ್ ಕುರ್ತಿ ಮೂಲದ ಕೌಶಲ್ ಸ್ವೀಟ್ಸ್ ನ ಶುಭಂ ವಿನೂತನ ಸ್ಪರ್ಧೆಯನ್ನು ಏರ್ಪಡಿಸಿದೆ.
ಸಮೋಸವೊಂದನ್ನು 30 ನಿಮಿಷದಲ್ಲಿ ನೀವು ತಿಂದರೆ ನಿಮಗೆ 71 ಸಾವಿರ ರೂಪಾಯಿ ಬಹುಮಾನ ಸಿಗಲಿದೆ. ಹಾಗೆಂದು ಇದು ಬಹಳ ಸುಲಭ ಎಂದು ನೀವು ಅಂದುಕೊಳ್ಳಬೇಡಿ. ಈ ಬಾಹುಬಲಿ ಸಮೋಸದ ತೂಕ ಬರೋಬ್ಬರಿ 12 ಕೆಜಿ. ಸಮೋಸವನ್ನು ಜನಪ್ರಿಯಗೊಳಿಸಲು ಈ ಯೋಜನೆಯನ್ನು ಹಾಕಿಕೊಂಡಿರುವುದಾಗಿ ಆಯೋಜಕರು ಹೇಳಿದ್ದಾರೆ. ಈ ಸಮೋಸವನ್ನು ತಯಾರಿಸಲು ಬಾಣಸಿಗರಿಗೆ ಸುಮಾರು 6 ಗಂಟೆ ಸಮಯ ತಗಲಿದೆ. ಈ ಬಾಹುಬಲಿ ಸಮೋಸ ಆಲೂಗಡ್ಡೆ, ಬಟಾಣಿ, ಮಸಾಲೆ ಪದಾರ್ಥ, ಪನ್ನೀರ್ ಮತ್ತು ಡ್ರೈ ಫ್ರೂಟ್ಸ್ ಗಳನ್ನು ಒಳಗೊಂಡಿದೆ.
ಸಮೋಸದ ಬೆಲೆ ಸುಮಾರು 1500 ರೂಪಾಯಿ. ಇದನ್ನು 30 ನಿಮಿಷದಲ್ಲಿ ತಿಂದವರಿಗೆ 71 ಸಾವಿರ ರೂಪಾಯಿ ಬಹುಮಾನ ಘೋಷಿಸಲಾಗಿದೆ.ಕೌಶಲ್ ಸ್ವೀಟ್ಸ್ ನ ಶುಭಂ ಬಾಹುಬಲಿ ಸಮೋಸವನ್ನು ತಯಾರಿಸುವುದು ಇದು ಮೊದಲೇನಲ್ಲ. ಈ ಹಿಂದೆ 4 ಕೆಜಿ, 8 ಕೆಜಿ ಸಮೋಸ ತಯಾರಿಸಿ ಸ್ಪರ್ಧೆ ನಡೆಸಿದ್ದಾರೆ. ನಮ್ಮ ಬಾಹುಬಲಿ ಸಮೋಸ ಅನೇಕರ ಗಮನ ಸೆಳೆದಿದೆ. ನಾವು ಈ ತರದ ಸಮೋಸ ತಯಾರಿಕೆಗಾಗಿ ಮುಂಗಡ ಆರ್ಡರ್ ತೆಗೆದುಕೊಳ್ಳುತ್ತೇವೆ ಎಂದು ಶುಭಂ ಹೇಳಿದ್ದಾರೆ. ಈ ಸಮೋಸ ಜನರ ಗಮನ ಸೆಳೆಯುವಂತೆ ಮಾಡಲು ಏನಾದರೂ ವಿಭಿನ್ನವಾಗಿ ಮಾಡಬೇಕೆಂದು ಬಯಸಿದ್ದೆ ಆಗಲೇ ಈ ಬಾಹುಬಲಿ ಯೋಜನೆ ಹೊಳೆದಿದ್ದು, ಈಗ ಜನಪ್ರಿಯವಾಗಿದೆ ಎಂದು ಶುಭಂ ಹೇಳಿದ್ದಾರೆ.