ಎಂ ಎಸ್ ಪಿ ಸಿ ಕೇಂದ್ರಕ್ಕೆ ಭೇಟಿ – ಅವ್ಯವಸ್ಥೆ ಕಂಡು ಆಕ್ರೋಶ ವ್ಯಕ್ತಪಡಿಸಿದ ಸಚಿವೆ ಹೆಬ್ಬಾಳ್ಕರ್

ಮಂಗಳೂರು: ಬೆಳಗಾವಿಯ ಮಹಿಳಾ ಸಪ್ಲಿಮೆಂಟರಿ ಪ್ರೊಡಕ್ಷನ್ ಸೆಂಟರ್ ಗೆ ದಿಢೀರ್ ಭೇಟಿ ನೀಡಿದ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅಲ್ಲಿನ ಕಳಪೆ ಆಹಾರ ಮತ್ತು ಅವ್ಯವಸ್ಥೆ ಕಂಡು ಕಿಡಿಕಾರಿದ್ದಾರೆ.

ಅಂಗನವಾಡಿ ಮಕ್ಕಳು ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಪೌಷ್ಟಿಕ ಆಹಾರ ಸರಬರಾಜು ಮಾಡುವ ಬೆಳಗಾವಿಯ ಹಲಗಾದಲ್ಲಿರುವ ಎಂ ಎಸ್ ಪಿ ಸಿ ಕೇಂದ್ರಕ್ಕೆ ಸಚಿವೆ ಹೆಬ್ಬಾಳ್ಕರ್ ಭೇಟಿ ನೀಡಿ, ಅಲ್ಲಿನ ಸ್ಥಿತಿ ಕಂಡು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳಪೆ ಗುಣಮಟ್ಟದ ಆಹಾರ ಸಂಗ್ರಹಿಸಿರುವುದು, ಇಡೀ ಆವರಣದಲ್ಲಿ ಸ್ವಚ್ಛತೆ ಇಲ್ಲದಿರುವುದನ್ನು ನೋಡಿ ಸಚಿವರು ದಂಗಾಗಿದ್ದಾರೆ. ಪೌಷ್ಟಿಕ ಆಹಾರ ಪೂರೈಸುವ ಸರಕಾರದ ಮೂಲ ಉದ್ದೇಶವೇ ಇಲ್ಲಿ ಬುಡ ಮೇಲಾಗಿದೆ ಎಂದು ಹೇಳಿದ ಸಚಿವೆ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ನಾನು ಇಲಾಖೆಯ ಸಚಿವೆಯಾಗಿ ಈ ವ್ಯವಸ್ಥೆಯನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ರಾಜ್ಯದ ಮಕ್ಕಳಿಗೆ, ಗರ್ಭಿಣಿಯರಿಗೆ, ಬಾಣಂತಿಯರಿಗೆ ಪೌಷ್ಟಿಕ ಆಹಾರ ಸಿಗಬೇಕು. ಯೋಜನೆ ಉದ್ದೇಶ ಸಫಲವಾಗಬೇಕು. ಯಾರದ್ದೋ ನಿರ್ಲಕ್ಷದಿಂದ ಇಡೀ ಯೋಜನೆ ವಿಫಲವಾಗಬಾರದು. ಮಕ್ಕಳು, ಗರ್ಭಿಣಿಯರು, ಬಾಣಂತಿಯರಿಗೆ ಅನ್ಯಾಯವಾಗಬಾರದು. ಹಾಗಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ಎಂ ಎಸ್ ಪಿ ಸಿ ಕೇಂದ್ರಗಳಿಗೂ ಭೇಟಿ ನೀಡಿ ಪರಿಶೀಲಿಸುತ್ತೇನೆ. ವಿಷಯವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ವ್ಯವಸ್ಥೆಗೆ ಅಮೂಲಾಗ್ರ ಬದಲಾವಣೆ ತರಲು ಕ್ರಮ ಕೈಗೊಳ್ಳುತ್ತೇನೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.

LEAVE A REPLY

Please enter your comment!
Please enter your name here