ಮಂಗಳೂರು: ಶಕ್ತಿ ಯೋಜನೆಯ ಮೂಲಕ ಕಾಂಗ್ರೆಸ್ ಸರ್ಕಾರದಿಂದ ಮಹಿಳೆಯರಿಗೆ ಬಸ್ಸಿನಲ್ಲಿ ಉಚಿತ ಪ್ರಯಾಣ ಘೋಷಣೆಯಾದ ಮೊದಲ ವಾರದಲ್ಲಿ ಬಸ್ ಗಳಲ್ಲಿ ಭಾರೀ ದಟ್ಟನೆ ಕಂಡುಬಂದಿತ್ತು. ಆದರೆ ಸದ್ಯ ಬಸ್ ನಿಲ್ದಾಣದಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಇಳಿಕೆ ಮುಖವಾಗಿದೆ. ಆರಂಭದಲ್ಲಿ ಉಚಿತ ಪ್ರಯಾಣದ ಲಾಭ ಪಡೆಯಲು ನಾರಿಯರು ಹರಸಾಹಸ ಪಡುತ್ತಿದ್ದು ಕಳೆದ ವಾರ ಪ್ರಯಾಣಿಕರಿಂದ ತುಂಬಿದ್ದ ಬಸ್ ನಿಲ್ದಾಣ ಇದೀಗ ಖಾಲಿ ಖಾಲಿಯಾಗಿದೆ.
KSRTC ಯಲ್ಲಿ ಉಚಿತ ಬಸ್ ಪ್ರಯಾಣದ ಹಿನ್ನೆಲೆಯಲ್ಲಿ ಕಳೆದ ವಾರ ಮಹಿಳೆಯರು ಪ್ರವಾಸಿತಾಣ, ಪುಣ್ಯಕ್ಷೇತ್ರಗಳಿಗೆ ತೆರಳುವ ನಿಟ್ಟಿನಲ್ಲಿ ಸೀಟು ಹಿಡಿಯಲು ಬಸ್ ಡೋರ್ ಬಳಿ ನೂಕಾಟ ತಳ್ಳಾಟ ನಿರ್ಮಾಣವಾಗಿತ್ತು. ಶಕ್ತಿಯೋಜನೆ ಜಾರಿಯಾಗಿ ಎರಡೇ ವಾರಕ್ಕೆ ಪ್ರಯಾಣಿಕರ ಸಂಖ್ಯೆ ಕುಸಿತವಾಗಿದೆ. ಮಹಿಳಾ ಪ್ರಯಾಣಿಕರಿಲ್ಲದೆ ಹಲವು ಬಸ್ ನಿಲ್ದಾಣಗಳು ಖಾಲಿ ಖಾಲಿಯಾಗಿದೆ.
ಶಕ್ತಿ ಯೋಜನೆ ಜಾರಿಯಾದ ಮೇಲೆ ಎರಡನೇ ವಾರಾಂತ್ಯದಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಿರಬಹುದೆಂದು ಭಾವಿಸಲಾಗಿತ್ತು. ಆದರೆ ಬೆಂಗಳೂರು ಮೆಜೆಸ್ಟಿಕ್, ಮೈಸೂರು ರಸ್ತೆ ಸ್ಯಾಟಲೈಟ್ ಬಸ್ ನಿಲ್ದಾಣ ಸೇರಿದಂತೆ ರಾಜ್ಯದ ಹಲವು ಬಸ್ ನಿಲ್ದಾಣಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿತ್ತು. ಮೊದಲ ವಾರದಲ್ಲಿ ಮಹಿಳೆಯರು ತೀರ್ಥ ಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದರು. ಆದರೆ ಈಗ ಆಷಾಢ ಬಂದಿದೆ. ಆಷಾಢದಲ್ಲಿ ತೀರ್ಥ ಕ್ಷೇತ್ರಗಳಿಗೆ ಹೋಗುವುದು ಕಡಿಮೆ. ಈ ಕಾರಣಕ್ಕೋ ಏನೋ ಈ ವಾರದ ಪ್ರಯಾಣಿಕರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂದು ಹೇಳಲಾಗುತ್ತಿದೆ.