ಮಂಗಳೂರು: ಕಾವಿಧಾರಿಗಳು ವಿವಿಧ ವೇಷಗಳನ್ನು ಬಳಸಿ ಸಾರ್ವಜನಿಕರನ್ನು ವಂಚಿಸುತ್ತಿರುವ ಪರಂಪರೆ ಇಂದು ನೆನ್ನೆಯದಲ್ಲ. ಸಾಕಷ್ಟಿರುವ ಇಂತಹ ಪ್ರಕರಣಗಳ ನಡುವೆ ಇಲ್ಲೊಬ್ಬ ಸ್ವಾಮಿಜಿ ನಾನೇ ಮಹಾವಿಷ್ಣು; ನಾನೇ ಪಾಂಡುರಂಗ ಎಂದು ಹೇಳಿಕೊಂಡು ಜನರನ್ನು ವಂಚಿಸುತ್ತಿದ್ದಾನೆ.
ತಿರುವಣ್ಣಾಮಲೈ ಜಿಲ್ಲೆಯವನಾದ ನಕಲಿ ಸ್ವಾಮಿ ಸಂತೋಷ್ ಕುಮಾರ್ ಗೆ ಎರಡು ಹೆಂಡತಿಯರು ಮತ್ತು ಒಬ್ಬ ಮಗನಿದ್ದಾನೆ. ಈ ನಕಲಿ ಸ್ವಾಮಿ ಕಳೆದ ಕೆಲವು ದಿನಗಳ ಹಿಂದೆ ತಿರುವಣ್ಣಾಮಲೈನಿಂದ ಇಬ್ಬರು ಪತ್ನಿಯರೊಂದಿಗೆ ತೆಲಂಗಾಣಕ್ಕೆ ಬಂದಿದ್ದಾನೆ. ಇಲ್ಲಿ ಬಂದವನೇ ಸಂತೋಷ್, ತನ್ನನ್ನು ಮಹಾ ವಿಷ್ಣು ಎಂದು ಮತ್ತು ತನ್ನ ಹೆಂಡತಿಯರನ್ನು ಶ್ರೀದೇವಿ ಮತ್ತು ಭೂದೇವಿ ಎಂದು ಹೇಳಿಕೊಂಡಿದ್ದಾನೆ. ಮುಂದುವರಿದು 5 ತಲೆಯ ಹಾವಿನ ಹಾಸಿಗೆಯನ್ನು ಮಾಡಿಸಿ ಅದರ ಮೇಲೆ ವಿಷ್ಣುವಿನಂತೆ ಪವಡಿಸಿ, ತನ್ನ 2 ಪತ್ನಿಯರಿಂದ ತನ್ನ ಕಾಲುಗಳನ್ನು ಒತ್ತುವಂತೆ ಮಾಡಿ, ತಿರುಪತಿ ತಿಮ್ಮಪ್ಪನ ವೇಷ ಧಾರಿಯಾಗಿ ನಾನೇ ದೇವರು ಎಂದು ಹೇಳುತ್ತಿದ್ದಾನೆ.
ಸ್ವಾಮೀಜಿಯ ಮಹಿಮೆಯಿಂದ ಮಾತು ಬಾರದವರು ಮಾತನಾಡಿದರು; ನಡೆಯಲಾರದವರು ನಡೆದರು ಎಂದು ಸುತ್ತಲಿನ ಗ್ರಾಮಸ್ಥರ ನಡುವೆ ನಡೆದ ಪ್ರಚಾರದಿಂದಾಗಿ ಸ್ವಾಮಿಜಿ ಬಳಿ ಬರುವ ಜನರ ಸಂಖ್ಯೆ ಹೆಚ್ಚುತ್ತಾ ಹೋಯಿತು. ಸ್ವಾಮಿ ದರ್ಶನಕ್ಕಾಗಿ ಜನ ಸರತಿಯ ಸಾಲಿನಲ್ಲಿ ನಿಂತು ಕಾಯಬೇಕಾದ ಪರಿಸ್ಥಿತಿಯು ನಿರ್ಮಾಣವಾಯಿತು.
ಭಕ್ತರ ಸಂಖ್ಯೆ ಹೆಚ್ಚಿದಂತೆ ಸ್ಥಳದಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಹೆಚ್ಚಾಗಿ ಸ್ಥಳಕ್ಕೆ ಕೋಡಿತೊಟ್ಟಿ ಪೊಲೀಸರು ಬರುವಂತಾಯಿತು. ಸ್ಥಳಕ್ಕೆ ಬಂದ ಪೊಲೀಸರು ಕಪಟ ಸಂತೋಷ್ ಸ್ವಾಮೀಜಿಯನ್ನು ಠಾಣೆಗೆ ಕರೆದೊಯ್ದಿದ್ದಾರೆ. ಇದರಿಂದ ಕ್ಷುದ್ರನಾದ ಸ್ವಾಮೀಜಿ ನಾನೇ ಮಹಾವಿಷ್ಣು; ನಾನೇ ಪಾಂಡುರಂಗ ಎಂದು ಕೂಗಿದ್ದಾನೆ. ನಂತರ ಪೊಲೀಸರು ಆತನಿಗೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.
ಸದ್ಯ ಮಹಾವಿಷ್ಣುವಿನ ವೇಷದಲ್ಲಿ ಇಬ್ಬರು ಪತ್ನಿಯರೊಂದಿಗೆ ಇರುವ ಸಂತೋಷ ಸ್ವಾಮೀಜಿಯ ಚಿತ್ರಗಳು ವಾಟ್ಸಾಪ್, ಫೇಸ್ ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಅಳಿದುಳಿದ ನಕಲಿ ಸ್ವಾಮೀಜಿಗಳ ಸಾಲಿಗೆ ಸಂತೋಷ್ ಕುಮಾರ್ ಸ್ವಾಮೀಜಿ ಹೊಸ ಸೇರ್ಪಡೆ.