ಮಂಗಳೂರು:ಚೀನಾದಲ್ಲಿ ನಾಯಿ ಮಾಂಸದ ಸಂತೆ ಆರಂಭವಾಗಿರುವುದನ್ನ ಕೇಳಿದ್ದೇವೆ. ಹುಳ, ಹುಪ್ಪಟ್ಟೆ, ಹಾವು ತಿನ್ನುವ ಇಲ್ಲಿನ ಜನರಿಗೆ ಬೌ ಬೌ ಬಿರಿಯಾನಿ ಹೊಸತೇನಲ್ಲ. ಆದರೆ ನಾಯಿ ಮಾಂಸವೆಂದರೆ ವಾಕರಿಕೆ ಬರುವ ಮೈಸೂರಿನ ಜನರಿಗೆ ಬೌ ಬೌ ಬಿರಿಯಾನಿ ಬಡಿಸಿದ ಹೋಟೆಲೊಂದಕ್ಕೆ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಬೀಗ ಜಡಿದಿದ್ದಾರೆ.
ಮೈಸೂರಿನ ಕೆ.ಆರ್.ನಗರದ ಪ್ರಭುಶಂಕರ ಬಿಲ್ಡಿಂಗ್ ನಲ್ಲಿರುವ ಗಣೇಶ್ ರೆಸ್ಟೋರೆಂಟ್ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ನಾಯಿ ಮಾಂಸದ ದಂಧೆ ಬೆಳಕಿಗೆ ಬಂದಿದೆ. ಇದರಿಂದ ಆಹಾರ ಪ್ರಿಯರಿಗೆ ಆಘಾತವಾಗಿದೆ.
ದಾಳಿ ವೇಳೆ ಅಧಿಕಾರಿಗಳು ನಾಯಿ ಮಾಂಸ ಅಲ್ಲದೆ ಕೊಳೆತ ಇತರ ಮಾಂಸಗಳನ್ನೂ ಪತ್ತೆ ಹಚ್ಚಿದ್ದಾರೆ. ಕೊಳೆತ ಮಾಂಸ, ಕಲ್ಲುಗಟ್ಟಿದ ಮೀನು, ಮಸಾಲೆ ಸಮೇತ ಬೂಸ್ಟ್ ಹಿಡಿದ ಮಾಂಸಾಹಾರ ಪತ್ತೆಯಾಗಿದೆ. ಇದೆಲ್ಲವನ್ನು ವಶಪಡಿಸಿಕೊಂಡ ಆಹಾರ ಇಲಾಖೆ ಅಧಿಕಾರಿಗಳು ರೆಸ್ಟೋರೆಂಟ್ ಗೆ ಬೀಗ ಜಡಿದಿದ್ದಾರೆ. ಇಂತಹ ಆಹಾರಗಳಿಂದ ತೀವ್ರ ಅನಾರೋಗ್ಯ ಕಾಣಿಸಿಕೊಳ್ಳಬಹುದು ಎಂದು ಅಧಿಕಾರಿಗಳು ತಿಳಿಸಿದ್ದು, ಮಾಲಕರಿಗೆ ದಂಡ ವಿಧಿಸಿದ್ದಾರೆ.
ದಾಳಿ ವೇಳೆ ತಹಶೀಲ್ದಾರ್ ಸಂತೋಷ್ ಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ. ಮಹೇಂದ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.