ಬಹುಸಂಖ್ಯಾತರ ಭಾವನೆಗಳಿಗೆ ಧಕ್ಕೆಯಾದರೆ ಅಶಾಂತಿ ನಿರ್ಮಾಣ ಖಂಡಿತ-ಕಟೀಲ್

ಮಂಗಳೂರು: ರಾಜ್ಯದಲ್ಲಿ ಬಹುಸಂಖ್ಯಾತರ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ರಾಜ್ಯ ಸರಕಾರ ಕೆಲಸ ಮಾಡುತ್ತಿದೆ. ಈ ಬಗ್ಗೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ಅಶಾಂತಿ ನಿರ್ಮಾಣ ಖಂಡಿತ ಎಂದು ದ.ಕ. ಸಂಸದ, ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಸರಕಾರಕ್ಕೆ ಒಂಭತ್ತು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಬೂತ್ ಕಾರ್ಯಕರ್ತರೊಂದಿಗೆ ಕದ್ರಿಯ ಗೋರಕ್ಷನಾಥ ಜ್ಞಾನ ಮಂದಿರದಲ್ಲಿ ಜೂ.27 ರಂದು ‘ನನ್ನ ಬೂತ್, ಎಲ್ಲಕ್ಕಿಂತ ಬಲಿಷ್ಠ ಬೂತ್’ ಕುರಿತ ನೇರ ಸಂವಾದ ಕಾರ್ಯಕ್ರಮ ವೀಕ್ಷಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಜನರ ಭಾವನೆಗಳಿಗೆ ವಿರುದ್ಧವಾಗಿ ಸರಕಾರ ನಡೆದರೆ ಇಲ್ಲಿ ಅಶಾಂತಿ ನಿರ್ಮಾಣವಾಗುವುದು ಖಂಡಿತ. ಆದ್ದರಿಂದ ಸರಕಾರ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು ಎಂದು ಹೇಳಿದ್ದಾರೆ. ರಾಜ್ಯ ಸರಕಾರ ಗೋಹತ್ಯೆ ನಿಷೇಧ ಕಾಯ್ದೆ ಹಿಂಪಡೆಯುವ ಪ್ರಸ್ತಾಪ ಉಲ್ಲೇಖಿಸಿದ ಅವರು, ದೇಶದಲ್ಲಿ ಗೋ ಸಂಸ್ಕೃತಿ ಇದೆ. ಕೃಷಿ, ಜೀವನ, ಆರಾಧನೆ ಎಲ್ಲದಕ್ಕೂ ಗೋವು ಮುಖ್ಯವಾಗಿದೆ. ಗೋಸಂರಕ್ಷಣೆಯ ಉದ್ದೇಶಕ್ಕೆ ಬಿಜೆಪಿ ಗೋ ಹತ್ಯೆ ನಿಷೇಧ ಕಾನೂನು ಜಾರಿಗೆ ತಂದಿತ್ತು. ಮಹಾತ್ಮ ಗಾಂಧಿಯೂ ಗೋ ಸಂರಕ್ಷಣೆ ಆಗಬೇಕು ಎಂದು ಹೇಳಿದ್ದರು ಎಂದರು.

ಕೆಲವು ಆಚರಣೆಯ ವೇಳೆ ಗೋ ಹತ್ಯೆ ಆಗುತ್ತದೆ. ಗೋವುಗಳ ರಕ್ಷಣೆಗಾಗಿ ನಾವು ಕಾನೂನು ತಂದಿದ್ದು, ಕಾನೂನು ಜಾರಿಯಲ್ಲಿರುವಾಗ ಗೋ ಕಳ್ಳತನ, ಗೋ ಹತ್ಯೆಗೆ ಅವಕಾಶ ನೀಡಬಾರದು. ಇವುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು. ಗೋಹತ್ಯೆ ವಿಚಾರದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಎಚ್ಚರಿಕೆಯಿಂದ ಮಾತನಾಡಬೇಕು. ಜನರ ಆಶಯಗಳಿಗೆ ಸರಕಾರ ಗೌರವ ನೀಡಬೇಕು. ಪೊಲೀಸರೂ ಗೋ ಹಂತಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನಳಿನ್ ಕುಮಾರ್ ಆಗ್ರಹಿಸಿದರು.

ಈ ಸಂದರ್ಭ ಶಾಸಕ ವೇದವ್ಯಾಸ್ ಕಾಮತ್, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದಿರೆ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here