ಮಂಗಳೂರು: ದೇಶದಾದ್ಯಂತ ಕಳೆದ ಕೆಲವು ದಿನಗಳಿಂದ ಹಲವಾರು ರಾಜ್ಯಗಳಲ್ಲಿ ಟೊಮೆಟೊ ಬೆಲೆ ಗಗನಕ್ಕೇರಿದ್ದು, ಚಿಲ್ಲರೆ ಮಾರುಕಟ್ಟೆಗಳಲ್ಲಿ ನೂರು ರೂಪಾಯಿ ಗಡಿಯನ್ನು ದಾಟಿದೆ.
ಈಗಾಗಲೇ ದಿನಬಳಕೆ ವಸ್ತುಗಳ ಬೆಲೆ ಏರಿಕೆಯ ಬಿಸಿಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಟೊಮೇಟೊ ದರ ಏರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕಿಲೋಗೆ 20 ರಿಂದ 30 ರೂಪಾಯಿ ಧಾರಣೆ ಇದ್ದ ಟೊಮೆಟೊ ದರವು ಈಗ 80 ರಿಂದ 120 ರೂಪಾಯಿಗೆ ಜಿಗಿದಿದೆ. ಮಾರುಕಟ್ಟೆಗೆ ಟೊಮೆಟೊ ಪೂರೈಕೆಯಲ್ಲಿ ಗಣನೀಯ ಇಳಿಮುಖವಾಗಿರುವುದೇ ಬೆಲೆ ಏರಿಕೆಗೆ ಕಾರಣವೆಂದು ಮೂಲಗಳು ತಿಳಿಸಿವೆ. ಟೊಮೆಟೊ ಅಧಿಕವಾಗಿ ಬೆಳೆಯುವ ರಾಜ್ಯಗಳಲ್ಲಿ ಭಾರಿ ಮಳೆ ಹಾಗೂ ಪ್ರವಾಹದ ಕಾರಣದಿಂದಾಗಿ ಪೂರೈಕೆ ಬಾಧಿತವಾಗಿದೆ ಎಂದು ಮಾರುಕಟ್ಟೆ ತಜ್ಞರು ಹೇಳುತ್ತಾರೆ.
ಕಳೆದ ಕೆಲವು ದಿನಗಳಿಂದ ದಕ್ಷಿಣದ ರಾಜ್ಯಗಳಾದ ಕರ್ನಾಟಕ, ತೆಲಂಗಾಣ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಇದರಿಂದಾಗಿ ಟೊಮೆಟೊ ಬೆಳೆಗೆ ಹಾನಿಯಾಗಿದೆ ಮತ್ತು ಮಾರುಕಟ್ಟೆಗೆ ಅವುಗಳ ಪೂರೈಕೆಯಲ್ಲಿ ಕೊರತೆ ಉಂಟಾಗಿದೆ ಎಂದು ಅವರು ಹೇಳಿದ್ದಾರೆ. ಮುಂದಿನ ಒಂದೆರಡು ದಿನಗಳಲ್ಲಿ ಟೊಮೇಟೊ ಬೆಲೆ ಇನ್ನಷ್ಟು ಏರಿಕೆ ಆಗುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ಪರಿಣಿತರು ಅಭಿಪ್ರಾಯ ಪಟ್ಟಿದ್ದಾರೆ.
ಇನ್ನೂ ಕೆಲವು ರಾಜ್ಯಗಳಲ್ಲಿ ತೀವ್ರವಾದ ಬಿಸಿ ಗಾಳಿಯಿಂದಾಗಿ ಟೊಮೆಟೊ ಉತ್ಪಾದನೆ ಕುಂಠಿತಗೊಂಡಿರುವುದು ಕೂಡ ಬೆಲೆ ಏರಿಕೆಗೆ ಇನ್ನೊಂದು ಕಾರಣ ಎಂದು ತಜ್ಞರು ಅಂದಾಜಿಸಿದ್ದಾರೆ. ಈ ವರ್ಷದ ಆರಂಭದಲ್ಲಿ ಟೊಮೇಟೊ ದರದಲ್ಲಿ ತೀವ್ರ ಕುಸಿತ ಉಂಟಾಗಿದ್ದರಿಂದ ರೈತರು ಬೀನ್ಸ್ ಕ್ರಷಿಯತ್ತ ಹೊರಳಿದ್ದಾರೆಂದು ಅವಶ್ಯ ವಸ್ತುಗಳ ತಜ್ಞ ಅಜಯ್ ಕೆಡಿಯಾ ತಿಳಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಸ್ಥಳೀಯ ಮಾರುಕಟ್ಟೆಯಲ್ಲಿ ಒಂದು ವಾರದ ಹಿಂದೆ ಕೆಜಿಗೆ 40 ರಿಂದ 50 ರೂಪಾಯಿಯಿಂದ ಟೊಮೇಟೊ ಈಗ ಕೆಜಿಗೆ ರೂ.100 ಗೆ ಮಾರಾಟವಾಗುತ್ತಿದೆ ಬೆಂಗಳೂರು ಹೈದರಾಬಾದ್ ನಗರಗಳಲ್ಲಿ ಟೊಮೆಟೊ ಬೆಲೆ ನೂರು ರೂಪಾಯಿಗೆ ಜಿಗಿದಿದೆ.