ಮಂಗಳೂರು(ಚೆನ್ನೈ): ದೇವಸ್ಥಾನದಲ್ಲಿ ಅರ್ಚಕರಾಗಿ ನಿಯುಕ್ತಿಗೊಳ್ಳುವಾಗ ಅವರ ಜಾತಿ ಪ್ರಮುಖವಾದ ವಿಷಯವಲ್ಲ. ಆತ ಆ ಕಾರ್ಯಕ್ಕೆ ಅರ್ಹನೇ ಎಂಬುದು ಮುಖ್ಯ ಎಂದು ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಆಯಾ ದೇವಸ್ಥಾನದ ಸಂಪ್ರದಾಯಗಳು ಆಗಮಿಕ ತತ್ವಗಳು ಮತ್ತು ದೇವಸ್ಥಾನದ ಪರಂಪರೆ ಆಚರಣೆಗಳ ಬಗ್ಗೆ ಸಮರ್ಪಕವಾಗಿ ತರಬೇತಿ ಪಡೆದುಕೊಂಡಿರಬೇಕು ಎಂದು ನ್ಯಾಯಮೂರ್ತಿ ಎನ್ ಆನಂದ್ ವೆಂಕಟೇಶ್ ಅವರಿದ್ದ ನ್ಯಾಯಪೀಠ ತೀರ್ಪು ನೀಡಿದೆ. ತಮಿಳುನಾಡಿನ ಸೇಲಂ ಜಿಲ್ಲೆಯ ಸುವರ್ಣೇಶ್ವರ ದೇವಾಲಯದ ಅರ್ಚಕ ಸಿಬ್ಬಂದಿ ನೇಮಕದ ಬಗ್ಗೆ 2018ರಲ್ಲಿ ಕಾರ್ಯನಿರ್ವಹಣಾಧಿಕಾರಿ ಆದೇಶ ಹೊರಡಿಸಿದ್ದರು. ಅರ್ಚಕರು ಮತ್ತು ಸ್ಥಾನಿಕರ ಹುದ್ದೆಯ ನೇಮಕಾತಿಗಾಗಿ ಹೊರಡಿಸಿದ ಅಧಿಸೂಚನೆಯನ್ನು ಪ್ರಶ್ನಿಸಿ ಹೈಕೋರ್ಟ್ ನಲ್ಲಿ ರಿಟ್ ಅರ್ಜಿಯನ್ನು ಸಲ್ಲಿಸಲಾಗಿತ್ತು.
ವಂಶವಾಹಿ ವಾರಸುದಾರರೇ ಅರ್ಚಕ ಹುದ್ದೆಗೆ ನೇಮಕಗೊಳ್ಳಬೇಕು ಎಂದು ಅರ್ಜಿದಾರರು ವಾದಿಸಿದ್ದರು. ಪರಂಪರೆಯ ಅರ್ಚಕ ನೇಮಕಾತಿ ಅಧಿಸೂಚನೆ ದೇವಸ್ಥಾನದ ರೂಢಿಗತ ಪದ್ಧತಿಗೆ ವಿರುದ್ಧವಾಗಿದೆ ಮತ್ತು ನೇಮಕಾತಿ ನಿಯಮವನ್ನು ಅಧಿಸೂಚನೆಯಲ್ಲಿ ಉಲ್ಲಂಘಿಸಲಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದರು.
ಈ ವಾದವನ್ನು ಅಲ್ಲಗಳೆದ ನ್ಯಾಯಪೀಠ ದೇವಸ್ಥಾನದ ಅರ್ಚಕ ನೇಮಕಾತಿಯು ಜಾತ್ಯಾತೀತವಾದ ಕಾರ್ಯವಾಗಿದೆ. ಇಂತಹ ನೇಮಕಾತಿಯಲ್ಲಿ ವಂಶ ಪಾರಂಪರ್ಯದ ಹಕ್ಕನ್ನು ಪ್ರದಿಪಾದಿಸಲಾಗದು ಎಂದು ಸ್ಪಷ್ಟಪಡಿಸಿದೆ.