ಮಂಗಳೂರು: 2002 ರ ಗೋದ್ರಾ ನಂತರದ ದಂಗೆಗಳ ಪ್ರಕರಣಕ್ಕೆ ಸಂಬಂಧಿಸಿ ಸಾಮಾಜಿಕ ಕಾರ್ಯಕರ್ತೆ, ಮಾನವ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಅವರಿಗೆ ಸುಪ್ರೀಂ ಕೋರ್ಟ್ ಶನಿವಾರ ರಾತ್ರಿ ನಡೆಸಿದ ವಿಶೇಷ ವಿಚಾರಣೆಯಲ್ಲಿ ಮಧ್ಯಂತರ ಜಾಮೀನು ನೀಡಿದೆ.
ಸಾಕ್ಷಾಧಾರಗಳನ್ನು ಸೃಷ್ಟಿಸಿದ ಆರೋಪದ ಮೇಲೆ ತೀಸ್ತಾ ಸೆಟಲ್ವಾಡ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಹೀಗಾಗಿ ಅವರು ಜಾಮೀನು ಅರ್ಜಿಯನ್ನು ಗುಜರಾತ್ ಹೈಕೋರ್ಟಿಗೆ ಸಲ್ಲಿಸಿದ್ದರು. ಆದರೆ ಅರ್ಜಿಯನ್ನು ತಿರಸ್ಕರಿಸಿದ್ದ ಗುಜರಾತ್ ಹೈಕೋರ್ಟ್ ಜಾಮೀನು ನೀಡುವುದಕ್ಕೆ ಸಾಧ್ಯವಿಲ್ಲ ತಕ್ಷಣವೇ ಶರಣಾಗಿ ಎಂದು ಸೂಚಿಸಿತ್ತು. ಈ ಹಿನ್ನಲೆಯಲ್ಲಿ ಗುಜರಾತ್ ಹೈಕೋರ್ಟ್ ಆದೇಶ ಪ್ರಶ್ನಿಸಿ ತೀಸ್ತಾ ಸೆಟಲ್ವಾಡ್ ಸುಪ್ರೀಂಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದರು.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಏ ಎಸ್ ಓಕಾ ಮತ್ತು ಪಿ ಕೆ ಮಿಶ್ರಾ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು ವಿಚಾರಣೆ ನಡೆಸಿತ್ತು. ಶರಣಾಗುವ ಆದೇಶ ನೀಡುವ ಮೊದಲು ಗುಜರಾತ್ ಹೈಕೋರ್ಟು ಸೆಟಲ್ ವಾರ್ಡ್ ಅವರಿಗೆ ಸ್ವಲ್ಪ ಸಮಯಾವಕಾಶವನ್ನು ನೀಡಬೇಕಿತ್ತು ಎಂದು ಅಭಿಪ್ರಾಯ ಪಟ್ಟಿತ್ತು. ಆದರೆ ಅವರಿಗೆ ಮಧ್ಯಂತರ ರಕ್ಷಣೆ ನೀಡುವ ಬಗ್ಗೆ ಒಮ್ಮತಕ್ಕೆ ಬರಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ನ ಮೂವರು ನ್ಯಾಯಾಧೀಶರ ಪೀಠಕ್ಕೆ ಪ್ರಕರಣವನ್ನು ವರ್ಗಾಯಿಸಿತ್ತು. ಶನಿವಾರ ರಾತ್ರಿ 9:15ಕ್ಕೆ ವಿಶೇಷ ವಿಚಾರಣೆಯನ್ನು ನಡೆಸಿದ ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ, ಎ ಎಸ್ ಬೋಪಣ್ಣ ಮತ್ತು ದೀಪಂಕರ್ ದತ್ತ ಅವರನ್ನೊಳಗೊಂಡ ಪೀಠವು ಜಾಮೀನು ಅರ್ಜಿಯನ್ನು ಪುರಸ್ಕರಿಸಿದ್ದು ಸದ್ಯ ಬಂಧನದಿಂದ ತೀಸ್ತಾ ಸೆಟಲ್ವಾಡ್ ಪಾರಾಗಿದ್ದಾರೆ.
ಹಿರಿಯ ವಕೀಲ ಸಿ ಯು ಸಿಂಗ್ ಮತ್ತು ವಕೀಲೆ ಅಪರ್ಣ ಭಟ್ ತೀಸ್ತಾ ಸೆಟಲ್ವಾಡ್ ಪರ ಹಾಗೂ ಗುಜರಾತ್ ಪೊಲೀಸರಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದ್ದರು.
ಗುಜರಾತ್ ಗಲಭೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಇತರರ ಬಗ್ಗೆ ನಕಲಿ ಸಾಕ್ಷ್ಯ ಸೃಷ್ಟಿಸಿದ , ಪೊಲೀಸರಿಗೆ ಆಧಾರ ರಹಿತ ಮಾಹಿತಿ ನೀಡಿದ ಹಾಗೂ ಕ್ರಿಮಿನಲ್ ಪಿತೂರಿ ನಡೆಸಲಾಗಿದೆ ಎಂಬ ಆರೋಪದ ಮೇಲೆ ತೀಸ್ತಾ ಸೆಟಲ್ವಾಡ್ ಮತ್ತು ಸಹ ಆರೋಪಿ ಮಾಜಿ ಐಪಿಎಸ್ ಅಧಿಕಾರಿ ಆರ್ ಬಿ ಶ್ರೀಕುಮಾರ್ ಅವರನ್ನು 2022ರ ಜೂನ್ 25ರಂದು ಗುಜರಾತ್ ಕ್ರೈಂ ಬ್ರಾಂಚ್ ಪೊಲೀಸರು ಬಂಧಿಸಿದ್ದರು.