ಮಂಗಳೂರು(ದೊಡ್ಡಬಳ್ಳಾಪುರ): ಚೆಕ್ ಬೌನ್ಸ್ ಪ್ರಕರಣವೊಂದರಲ್ಲಿ ಹಿರಿಯ ರಾಜಕೀಯ ಮುತ್ಸದ್ದಿ ಆರ್ ಎಲ್ ಜಾಲಪ್ಪ ಅವರ ಪುತ್ರ ಮಾಜಿ ಶಾಸಕ ಜೆ ನರಸಿಂಹಸ್ವಾಮಿ ಅವರಿಗೆ ನ್ಯಾಯಾಲಯ ದಂಡ ಮತ್ತು ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ವೈದ್ಯಕೀಯ ಸೀಟು ಕೊಡಿಸುವುದಾಗಿ ಭರವಸೆ ನೀಡಿ ಲಕ್ಷಾಂತರ ರೂಪಾಯಿ ಹಣ ಪಡೆದು ಹಣ ಹಿಂದಿರುಗಿಸದೆ ಚೆಕ್ ಬೌನ್ಸ್ ಆದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿ ದೊಡ್ಡಬಳ್ಳಾಪುರದ ಮಾಜಿ ಶಾಸಕ ನರಸಿಂಹಸ್ವಾಮಿ ಅವರನ್ನು ಅಪರಾಧಿ ಎಂದು ಘೋಷಿಸಿದೆ.
ದೂರುದಾರರಿಗೆ 65 ಲಕ್ಷ ರೂಪಾಯಿ ಪಾವತಿಸಬೇಕು ಇಲ್ಲದಿದ್ದರೆ ಆರು ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ. ಬೆಂಗಳೂರಿನ ಪ್ರಕಾಶ್ ಕುಮಾರ್ ಯರಪ್ಪ ದಾಖಲಿಸಿದ್ದ ದೂರನ್ನು ವಿಚಾರಣೆಗೆ ಎತ್ತಿಕೊಂಡ ಬೆಂಗಳೂರಿನ ಜನಪ್ರತಿನಿಧಿಗಳ ವಿರುದ್ಧದ ಪ್ರಕರಣಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಜೆ ಪ್ರೀತ್ ಈ ಆದೇಶ ಹೊರಡಿಸಿದ್ದಾರೆ.
ದೂರುದಾರರಾದ ಪ್ರಕಾಶ್ ತಮ್ಮ ಮಗಳಿಗೆ ವೈದ್ಯಕೀಯ ಸೀಟು ಕೊಡಿಸುವುದಕ್ಕೆ ಪ್ರಯತ್ನಿಸುತ್ತಿದ್ದ ವೇಳೆ ನರಸಿಂಹ ಸ್ವಾಮಿ ಪರಿಚಯವಾಯಿತು. ಪ್ರಕಾಶ್ ಪತ್ನಿ ಮತ್ತು ನರಸಿಂಹ ಸ್ವಾಮಿ ಪತ್ನಿ ದೂರದ ಸಂಬಂಧಿಗಳಾಗಿದ್ದು ಸೀಟು ಕೊಡಿಸುವುದಾಗಿ ಭರವಸೆ ನೀಡಿದ್ದರು. ಈ ಭರವಸೆಯ ಮೇರೆಗೆ 25 ಲಕ್ಷ ರೂಪಾಯಿಗಳನ್ನು ನರಸಿಂಹಸ್ವಾಮಿ ಮನೆಗೆ ತಲುಪಿಸಲಾಗಿತ್ತು. ಆದರೆ ನರಸಿಂಹಸ್ವಾಮಿ ತಮ್ಮ ಮಗಳಿಗೆ ವೈದ್ಯಕೀಯ ಸೀಟನ್ನು ಕೊಡಿಸಿಲ್ಲ ಹಣವನ್ನು ವಾಪಸ್ ಮಾಡಿಲ್ಲ ಎಂದು ಆರೋಪಿಸಿದ್ದರು. ಈ ಸಂಬಂಧ ಎಫ್ಐಆರ್ ಕೂಡ ದಾಖಲಾಗಿತ್ತು.