ಜುಲೈ 20 ರಿಂದ ಆಗಸ್ಟ್‌ 11ರ ವರೆಗೆ ಸಂಸತ್ತಿನ ಮುಂಗಾರು ಅಧಿವೇಶನ

ಮಂಗಳೂರು: ಸಂಸತ್ತಿನ ಮುಂಗಾರು ಅಧಿವೇಶನ ಜುಲೈ 20 ರಿಂದ ಆಗಸ್ಟ್ 11ರ ವರೆಗೆ ನಡೆಯಲಿದೆ. ಈ ಕುರಿತು ಟ್ವೀಟ್ ಮಾಡಿರುವ ಸಂಸದೀಯ ವ್ಯವಹಾರಗಳ ಸಚಿವ ಪ್ರಹಲ್ಲಾದ್ ಜೋಶಿ ರಚನಾತ್ಮಕ ಚರ್ಚೆಗೆ ಎಲ್ಲಾ ರಾಜಕೀಯ ಪಕ್ಷಗಳು ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ. ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಬಲವಾಗಿ ಪ್ರತಿಪಾದಿಸುತ್ತಿದ್ದಾರೆ. ಈ ಕುರಿತು ವ್ಯಾಪಕ ಸಮಾಲೋಚನೆಗೂ ಚಾಲನೆ ನೀಡಲಾಗಿದೆ.

ಇನ್ನೊಂದೆಡೆ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಒಗ್ಗಟ್ಟಿನಿಂದ ಹೋರಾಡಲು ವಿರೋಧ ಪಕ್ಷಗಳಿಂದ ಪ್ರಯತ್ನಗಳು ಮುಂದುವರಿದಿದೆ. ಈ ಎಲ್ಲಾ ಕಾರಣಗಳಿಂದಾಗಿ ಈ ಮುಂಗಾರು ಅಧಿವೇಶನವು ಕಾವೇರಿದ ಚರ್ಚೆಗಳಿಂದ ಕೂಡಿರುವ ಸಾಧ್ಯತೆ ಇದೆ. ಅಧಿವೇಶನದಲ್ಲಿ ದೆಹಲಿ ಸರಕಾರದ ರಾಷ್ಟ್ರೀಯ ರಾಜಧಾನಿ ದೆಹಲಿ ಪ್ರದೇಶ ತಿದ್ದುಪಡಿ ಸುಗ್ರೀವಾಜ್ಞೆಯನ್ನು ಬದಲಾಯಿಸಲು ಸರಕಾರ ಹೊಸಮಸೂದೆ ಮಂಡಿಸುವ ಸಾಧ್ಯತೆಯೂ ಇದೆ. ದೆಹಲಿಯ ಸೇವಾ ವಿಷಯಗಳ ಆಡಳಿತಾತ್ಮಕ ನಿಯಂತ್ರಣ ಕುರಿತು ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಈ ಸುಗ್ರೀವಾಜ್ಞೆ ರದ್ದು ಪಡಿಸಿತ್ತು.

ಹಳೆ ಸಂಸತ್ತು ಭವನದಲ್ಲಿ ಅಧಿವೇಶನಕ್ಕೆ ಚಾಲನೆ ನೀಡಿ ನಂತರ ಹೊಸ ಭವನಕ್ಕೆ ಸ್ಥಳಾಂತರ ಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಕೇಂದ್ರ ಸಚಿವ ಸಂಪುಟ ಅನುಮೋದಿಸಿದ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನ ಮಸೂದೆ ಮಂಡಿಸುವ ಸಾಧ್ಯತೆಯೂ ಇದೆ.

ದೆಹಲಿಯ ಅಂತರಾಷ್ಟ್ರೀಯ ವಸ್ತು ಪ್ರದರ್ಶನ ಮತ್ತು ಸಮಾವೇಶ ಕೇಂದ್ರದಲ್ಲಿ ನಡೆದ 17ನೇ ಭಾರತೀಯ ಸಹಕಾರ ಕಾಂಗ್ರೆಸ್ ನಲ್ಲಿ ಭಾಗವಹಿಸಿ ಮಾತನಾಡಿದ ಕೇಂದ್ರ ಗ್ರಹ ಸಚಿವ ಅಮಿತ್ ಷಾ, ಬಹುರಾಜ್ಯ ಸಹಕಾರ ಸಂಘಗಳ ಕಾಯ್ದೆಗೆ ತಿದ್ದುಪಡಿ ತರುವುದಕ್ಕೆ ಸಂಬಂಧಿಸಿದ ಮಸೂದೆಯನ್ನು ಪ್ರಸಕ್ತ ಮುಂಗಾರು ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದು ಹೇಳಿದ್ದಾರೆ.

ಏಕರೂಪ ನಾಗರಿಕ ಸಂಹಿತೆ ಮಣಿಪುರ ಹಿಂಸಾಚಾರ ಮತ್ತು ದೆಹಲಿಯ ಸೇವಾ ವಿಷಯಗಳ ಆಡಳಿತಾತ್ಮಕ ನಿಯಂತ್ರಣ ಕುರಿತು ಕೇಂದ್ರ ಸರಕಾರ ತಂದಿರುವ ಸುಗ್ರೀವಾಜ್ಞೆ ಕುರಿತಾದ ವಿಚಾರಗಳಲ್ಲಿ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳಲು ವಿರೋಧ ಪಕ್ಷಗಳು ಸಿದ್ಧವಾಗಿವೆ.

LEAVE A REPLY

Please enter your comment!
Please enter your name here