ಮಂಗಳೂರು: ರಾಜ್ಯ ಚುನಾವಣಾ ಆಯೋಗವು 2023ರ ಆಗಸ್ಟ್ ತಿಂಗಳಿಗೆ ಅವಧಿ ಮುಕ್ತಾಯವಾಗುವ 14 ಗ್ರಾಮ ಪಂಚಾಯತ್ ಗಳ 207 ಸದಸ್ಯ ಸ್ಥಾನಗಳಿಗೆ ಚುನಾವಣೆಯನ್ನು ಹಾಗೂ ಗ್ರಾಮ ಪಂಚಾಯತ್ ಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿ ಖಾಲಿ ಉಳಿದಿರುವ 174 ಗ್ರಾಮ ಪಂಚಾಯತ್ ಗಳ 223 ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ನಡೆಸಲು ವೇಳಾಪಟ್ಟಿಯನ್ನು ನಿಗದಿಪಡಿಸಿ ಆದೇಶ ಹೊರಡಿಸಿದೆ.
ಜುಲೈ 6 ಕ್ಕೆ ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆಯನ್ನು ಹೊರಡಿಸಲಿದ್ದಾರೆ. ನಾಮಪತ್ರಗಳನ್ನು ಸಲ್ಲಿಸಲು ಜುಲೈ 12 ಕೊನೆಯ ದಿನವಾಗಿದೆ. ಇನ್ನು ಜುಲೈ 13 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಜುಲೈ 15ಕ್ಕೆ ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದೆ. ಅವಶ್ಯವಿದ್ದೆಡೆ ಜುಲೈ 23ಕ್ಕೆ ಮತದಾನ ನಡೆಯಲಿದ್ದು, ಅವಶ್ಯವಿದ್ದಲ್ಲಿ ಜುಲೈ 25ಕ್ಕೆ ಮರು ಮತದಾನ ನಡೆಯಲಿದೆ. ಜುಲೈ 26 ರಂದು ಮತಗಳ ಎಣಿಕೆ ನಡೆಯಲಿದೆ. ಚುನಾವಣೆ ನಡೆಯುವ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಜುಲೈ 6 ರಿಂದ 26 ರವರೆಗೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರಲಿದೆ.