ಜುಲೈ 15ರೊಳಗೆ ಬಾಕಿ ಬಿಲ್ ಪಾವತಿಸದಿದ್ದರೆ ಕಾಮಗಾರಿ ಸ್ಥಗಿತ – ಗುತ್ತಿಗೆದಾರರ ಸಂಘದಿಂದ ಎಚ್ಚರಿಕೆ

ಮಂಗಳೂರು (ಬೆಂಗಳೂರು): ಬಾಕಿ ಇರುವ ಬಿಲ್ ಗಳನ್ನು ಜುಲೈ 15ರೊಳಗೆ ಪಾವತಿಸುವಂತೆ ಒತ್ತಾಯಿಸಿ ರಾಜ್ಯ ಗುತ್ತಿಗೆದಾರರ ಸಂಘವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದೆ. ಇಲ್ಲದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಸಂಘ ಎಚ್ಚರಿಕೆ ನೀಡಿದೆ.

ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಹಿಂದಿನ ಬಿಜೆಪಿ ಸರ್ಕಾರ ಆರಂಭಿಸಿದ್ದ ಕಾಮಗಾರಿಗಳನ್ನು ಸ್ಥಗಿತಗೊಳಿಸಲು ಆದೇಶಿಸಿದ್ದು ಬಿಲ್ಲುಗಳ ಮಂಜೂರಾತಿ ನಿಲ್ಲಿಸುವಂತೆ ಆದೇಶ ಹೊರಡಿಸಿತ್ತು. ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ ಕೆಂಪಣ್ಣ ನೇತೃತ್ವದ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದು, ಈ ವೇಳೆ ಬಿಲ್ಲುಗಳನ್ನು ಮಂಜೂರು ಮಾಡುವುದಾಗಿ ಸಿದ್ದರಾಮಯ್ಯ ಭರವಸೆ ನೀಡಿದ್ದು, ಈ ಸಂಬಂಧ ಜೂನ್ 26ರಂದು ಆದೇಶ ಹೊರಡಿಸಿದ್ದರೂ ಬಿಲ್ ಮಂಜೂರಾಗಿಲ್ಲ ಎಂದು ಸಂಘದ ಪತ್ರದಲ್ಲಿ ತಿಳಿಸಲಾಗಿದೆ. ಆದೇಶವಿದ್ದರೂ ಅಧಿಕಾರಿಗಳು ಸರಕಾರದಿಂದ ಯಾವುದೇ ಸುತ್ತೋಲೆ ಬಂದಿಲ್ಲ ಎಂದು ಹೇಳಿ ಬಿಲ್ಲುಗಳನ್ನು ಕ್ಲಿಯರ್ ಮಾಡಲು ನಿರಾಕರಿಸುತ್ತಿದ್ದಾರೆ ಎಂದು ಸಂಘವು ಆರೋಪಿಸಿದೆ.

ಹಲವು ಗುತ್ತಿಗೆದಾರರು ಆರ್ಥಿಕ ಸಂಕಷ್ಟದಲ್ಲಿದ್ದು ಬಿಲ್ಲುಗಳನ್ನು ಮಂಜೂರು ಮಾಡಲು ಹೊಸದಾಗಿ ಆದೇಶ ಹೊರಡಿಸುವಂತೆ ಮನವಿ ಮಾಡಿದ್ದಾರೆ. ಜುಲೈ 15ರ ಒಳಗೆ ಬಿಲ್ಲುಗಳನ್ನು ಮಂಜೂರು ಮಾಡದಿದ್ದರೆ ಎಲ್ಲಾ ಕಾಮಗಾರಿಗಳನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸುವುದಾಗಿ ಗುತ್ತಿಗೆದಾರರ ಸಂಘವು ಎಚ್ಚರಿಕೆ ನೀಡಿದೆ.

LEAVE A REPLY

Please enter your comment!
Please enter your name here