ಬೆಂಗಳೂರು: ಗ್ಯಾರಂಟಿ ಯೋಜನೆಗಳನ್ನು ಬಿಟ್ಟಿ ಯೋಜನೆ ಎಂದು ಟೀಕೆ ಮಾಡುವವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಭಾಷಣದಲ್ಲಿ ಚಾಟಿ ಬೀಸಿದ್ದಾರೆ.
ಗ್ಯಾರಂಟಿ ಯೋಜನೆಗಳನ್ನು ಕೇವಲ ಬಿಟ್ಟಿ ಕೊಡುಗೆಗಳೆಂದು ಆಡಿಕೊಳ್ಳುವವರು ಒಮ್ಮೆ ನಮ್ಮ ಬಡವರ, ಶ್ರಮಿಕರ ಬದುಕನ್ನು ಗಮನಿಸಬೇಕಾಗಿದೆ ಎಂದು ತಮ್ಮ ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ.
‘ನಮ್ಮ ಐದು ಗ್ಯಾರಂಟಿಗಳ ಬಗ್ಗೆ ಟೀಕೆ ಟಿಪ್ಪಣಿ ಮಾಡುವುದು, ಇಲ್ಲ ಸಲ್ಲದ ಸುಳ್ಳು ಸುದ್ದಿಗಳನ್ನು ಹಬ್ಬಿಸುವುದು, ಜನರಲ್ಲಿ ಗೊಂದಲ ಮೂಡಿಸುವುದು, ಇಂತಹ ಕೆಲಸ ಮಾಡುತ್ತಿರುವ ವಿರೋಧ ಪಕ್ಷದವರಿಗೆ ಒಂದೇ ಒಂದು ಮಾತು ಹೇಳಲು ಬಯಸುತ್ತೇನೆ. ಗ್ಯಾರಂಟಿ ಯೋಜನೆಗಳನ್ನು ಕೇವಲ ಬಿಟ್ಟಿ ಕೊಡುಗೆಗಳೆಂದು ಆಡಿಕೊಳ್ಳುವವರು ಒಮ್ಮೆ ನಮ್ಮ ಬಡವರ, ಶ್ರಮಿಕರ ಬದುಕನ್ನು ಗಮನಿಸಬೇಕಾಗಿದೆ. ತಾವು ವಿರೋಧ ಪಕ್ಷದ ಜವಾಬ್ದಾರಿಯನ್ನು ನಿರ್ವಹಿಸಿ. ಆದರೆ ಶ್ರೀಸಾಮಾನ್ಯರ ವಿವೇಚನೆಗೆ ಅಪಮಾನ ಮಾಡಬೇಡಿ ಎಂದು ವಿನಂತಿ ಮಾಡಿಕೊಳ್ಳುತ್ತೇನೆ. ಜನರು ಬುದ್ಧಿವಂತರು, ಜನರು ಪ್ರಜ್ಞಾವಂತರು. ಇಂತಹ ತರ್ಕರಹಿತ ಆಲೋಚನೆಗಳನ್ನು ನಂಬುವುದಿಲ್ಲ. ವಾಸ್ತವವೆಂದರೆ, ಜನ ನಿಮ್ಮಿಂದ ಬೇಸತ್ತು ಇಷ್ಟೊಂದು ಭಾರಿ ಬಹುಮತದಿಂದ ನಮ್ಮನ್ನು ಆರಿಸಿ ವಿಧಾನ ಸೌಧಕ್ಕೆ ಕಳುಹಿಸಿದ್ದಾರೆ‘ ಎಂದು ಹೇಳಿದ್ದಾರೆ.