



ಮಂಗಳೂರು (ಬೆಂಗಳೂರು) : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮಂಡನೆ ವೇಳೆ ಭದ್ರತಾ ಲೋಪವಾಗಿದೆ. ಶಾಸಕರಲ್ಲದ ವ್ಯಕ್ತಿಯೊಬ್ಬ ವಿಧಾನಸಭೆ ಪ್ರವೇಶಿಸಿದ್ದಾನೆ. ಅಲ್ಲದೇ ಬಜೆಟ್ ಮಂಡನೆ ವೇಳೆ ಸಮಾರು 15 ನಿಮಿಷಗಳ ಕಾಲ ದೇವದುರ್ಗ ಶಾಸಕಿಯ ಆಸನದಲ್ಲಿ ಕುಳಿತಿದ್ದಾನೆ.
ಇದನ್ನು ಗಮನಿಸಿದ ಜೆಡಿಎಸ್ ಶಾಸಕ ಶರಣಗೌಡ ಕಂದಕೂರು, ವ್ಯಕ್ತಿ ಬಗ್ಗೆ ಅನುಮಾನ ಬಂದಿದ್ದು, ಕೂಡಲೇ ಸ್ಪೀಕರ್ ಯು ಟಿ ಖಾದರ್ ಅವರ ಗಮನಕ್ಕೆ ತಂದಿದ್ದಾರೆ. ಆದರೆ, ಅಷ್ಟರೊಳಗಾಗಿ ಆ ಅನಾಮಿಕ ವ್ಯಕ್ತಿ ಅಲ್ಲಿಂದ ಕಾಲ್ಕಿತ್ತಿದ್ದಾನೆ.







ಆ ಬಳಿಕ ಸದನದೊಳಗೆ ಸುಮಾರು 15ರಿಂದ 20 ನಿಮಷಗಳ ಕಾಲ ಕುಳಿತು ಬಳಿಕ ದಿಢೀರ್ ನಾಪತ್ತೆಯಾದ ಅನಾಮಿಕ ವ್ಯಕ್ತಿ ಸಿಕ್ಕಿಬಿದ್ದಿದ್ದು, ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅನಾಮಿಕ ವ್ಯಕ್ತಿಯನ್ನು ತಿಪ್ಪೇರುದ್ರ (72) ಎಂದು ಗುರುತಿಸಲಾಗಿದೆ.



ತಿಪ್ಪೇರುದ್ರ ಸದನದೊಳಗೆ ಪ್ರವೇಶಿಸುವ ವೇಳೆ ಮಾರ್ಷಲ್ ಗಳು ವಿಚಾರಿಸಿದ್ದರು. ಆ ಸಂದರ್ಭದಲ್ಲಿ ಆತ ಶಾಸಕ ಎನ್.ವೈ.ಗೋಪಾಲಕೃಷ್ಣ ಹೆಸರು ಹೇಳಿ ಮಾರ್ಷಲ್ ಗೆ ಅವಾಜ್ ಹಾಕಿ ಸದನದೊಳಗೆ ಪ್ರವೇಶ ಮಾಡಿದ್ದ. ಆತನೊಂದಿಗೆ ಒಂದು ಬ್ಯಾಗ್ ತಂದಿದ್ದ ಎಂದು ಪೊಲೀಸರ ಪ್ರಾಥಮಿಕ ವಿಚಾರಣೆಯಿಂದ ತಿಳಿದುಬಂದಿದೆ. ಇನ್ನು ಈ ಬಗ್ಗೆ ಜಂಟಿ ಪೊಲೀಸ್ ಆಯುಕ್ತ ಶರಣಪ್ಪ ಅವರು ತಿಪ್ಪೇರುದ್ರನನ್ನು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ತೀವ್ರ ವಿಚಾರಣೆಗೊಳಪಡಿಸಿದ್ದು, ಈ ಬಗ್ಗೆ ಇನ್ನಷ್ಟು ಮಾಹಿತಿ ತಿಳಿದು ಬರಬೇಕಿದೆ.











