ಮಂಗಳೂರು : ರಾಷ್ಟ್ರಮಟ್ಟದಲ್ಲಿ ಕೋಲಾಹಲ ಸೃಷ್ಟಿಸಿದ್ದ ಅಂತರಾಷ್ಟ್ರೀಯ ಹ್ಯಾಕರ್ ಶ್ರೀ ಕೃಷ್ಣನ ಬಿಟ್ ಕಾಯಿನ್ ಹಗರಣದ ಮರುತನಿಖೆ ಆರಂಭವಾಗಿರುವ ಬೆನ್ನಲ್ಲೇ ಕರ್ನಾಟಕದಲ್ಲಿ ಬಂಧಿತರಾಗಿರುವ ಶಂಕಿತ ಉಗ್ರರಿಗೆ ಭಯೋತ್ಪಾದನಾ ಕೃತ್ಯವೆಸಗಲು ಕ್ರಿಪ್ಟೋ ಕರೆನ್ಸಿ ಮೂಲಕವೇ ವಿದೇಶಗಳಿಂದ ಲಕ್ಷಾಂತರ ರೂಪಾಯಿ ನೆರವು ಕೊಟ್ಟಿರುವ ಆತಂಕಕಾರಿ ವಿಚಾರ ಎನ್ ಐ ಎ ತನಿಖೆಯಲ್ಲಿ ಬಹಿರಂಗಗೊಂಡಿದೆ.
ಫೇಸ್ಬುಕ್ ,ಟೆಲಿಗ್ರಾಂ ಮುಖೇನ ಬಿಟ್ ಕಾಯಿನ್ ಸಂಗ್ರಹಿಸಿ ಡಾರ್ಕ್ ನೆಟ್ ಮುಖಾಂತರ ವಿವಿಧ ವ್ಯಾಲೆಟ್ ಗಳಿಗೆ ವರ್ಗಾವಣೆ ಮಾಡಿರುವ ಸಂಗತಿ ತನಿಖೆಯಲ್ಲಿ ಬಹಿರಂಗಗೊಂಡಿದೆ.
ಮಂಗಳೂರಿನಲ್ಲಿ ನಡೆದ ಕುಕ್ಕರ್ ಸ್ಫೋಟ ಹಾಗೂ ಶಿವಮೊಗ್ಗದಲ್ಲಿ ನಡೆದ ಟ್ರಯಲ್ ಬಾಂಬ್
ಸ್ಫೋಟ ಪ್ರಕರಣದಲ್ಲಿ ಬಂಧಿತ ಶಂಕಿತ ಉಗ್ರರಿಗೆ ಐಸಿಸ್ ಹ್ಯಾಂಡ್ಲರ್ ಗಳು ಡಾರ್ಕ್ ವೆಬ್ ಮುಖಾಂತರ ಕ್ರಿಪ್ಟೋ ಕರೆನ್ಸಿ ಕಳುಹಿಸಿರುವುದು ದೃಢಪಟ್ಟಿದೆ. ಈ ಬಗ್ಗೆ ಎನ್ ಐ ಎ ಇತ್ತೀಚೆಗೆ ಸಲ್ಲಿಸಿರುವ ಹೆಚ್ಚುವರಿ ಚಾರ್ಜ್ ಶೀಟ್ ನಲ್ಲೂ ಉಲ್ಲೇಖಿಸಿದೆ. ಕರ್ನಾಟಕದ ಬಿಟ್ ಕಾಯಿನ್ ಹಗರಣದಲ್ಲಿ ಇಸ್ರೇಲ್ ತನಿಕ ಏಜೆನ್ಸಿ ಸಹಾಯ ಪಡೆಯಲು ಸಿಐಡಿ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ಆರೋಪಿ ಮೊಹಮ್ಮದ್ ಶಾರಿಕ್ ಡಾರ್ಕ್ ನೆಟ್ ನಲ್ಲಿ ಖಾತೆ ಹೊಂದಿದ್ದು ವಿದೇಶದಿಂದ ಡಾಲರ್ ಹಾಗೂ ಬಿಟ್ ಕಾಯಿನ್ ಈತನ ಖಾತೆಗೆ ಜಮೆ ಆಗುತ್ತಿತ್ತು ಎಂಬುದು ತನಿಖೆಯಲ್ಲಿ ತಿಳಿದು ಬಂದಿದೆ.