ಮಂಗಳೂರು (ಬೆಂಗಳೂರು): ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಪೂರೈಕೆಗೆ ಅಡ್ಡಿ ಉಂಟಾಗಿ ದಿಲ್ಲಿ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಪ್ರತಿ ಕೆಜಿ ಟೊಮೆಟೊ ದ ಚಿಲ್ಲರೆ ಬೆಲೆ 200 ರೂಪಾಯಿಗೆ ತಲುಪಿದೆ. ಇದರೊಂದಿಗೆ ಇತರ ತರಕಾರಿಗಳ ಬೆಲೆಗಳು ಕೂಡ ಗಗನಕ್ಕೇರಿದು ಗೃಹಿಣಿಯರು ಆತಂಕಕ್ಕೀಡಾಗಿದ್ದಾರೆ. ಭಾರಿ ಮಳೆಯಿಂದಾಗಿ ತರಕಾರಿ ಬೆಳೆಯುವ ಪ್ರದೇಶಗಳು ಜಲಾವೃತವಾಗಿವೆ. ಇದರಿಂದ ಟೊಮೆಟೊ ಬೆಳೆ ಹಾಗೂ ನೆಲದಡಿಯಲ್ಲಿ ಬೆಳೆಯುವ ತರಕಾರಿಗಳು ಅದರಲ್ಲೂ ಮುಖ್ಯವಾಗಿ ನೀರುಳ್ಳಿ, ಶುಂಠಿಗೆ ಹಾನಿ ಉಂಟಾಗಿದೆ.
ಇನ್ನೊಂದೆಡೆ ಮೂವರು ಖದೀಮರು ಸೇರಿ ಎರಡು ಟನ್ ಟೊಮೆಟೊ ಹೊತ್ತಿದ್ದ ಬುಲೆರೋ ವಾಹನವನ್ನು ಎಗರಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ರೈತರೊಬ್ಬರು ಚಿತ್ರದುರ್ಗದಿಂದ 250ಕ್ಕೂ ಹೆಚ್ಚು ಟೊಮೆಟೊ ಟ್ರೇ ಗಳನ್ನು ತುಂಬಿಕೊಂಡು ಬೊಲೆರೋ ವಾಹನದಲ್ಲಿ ಬೆಂಗಳೂರಿಗೆ ಬರುತ್ತಿದ್ದರು. ಈ ವೇಳೆ ಗಾಡಿ ಫಾಲೋ ಮಾಡಿ ಬಂದ ಮೂವರು ಆರೋಪಿಗಳು ಆರ್ ಎಂಸಿ ಯಾರ್ಡ್ ಬಳಿ ಅಡ್ಡ ಹಾಕಿ ರೈತನಿಗೆ ಆವಾಜ್ ಹಾಕಿದ್ದಾರೆ. ಗಾಡಿ ಟಚ್ ಆಗಿದೆ ಎಂದು ನಾಟಕ ಮಾಡಿ ಡ್ರೈವರಿಗೆ ತಿಳಿಸಿದ್ದು, ನಂತರ ರೈತನ ಮೇಲು ಹಲ್ಲೆ ಮಾಡಿ ಹಣ ಕೊಡು ಎಂದು ಅವಾಜ್ ಹಾಕಿದ್ದಾರೆ. ಹಣ ಇಲ್ಲ ಎಂದಾಗ ಗಾಡಿಯಲ್ಲಿ ರೈತನನ್ನು ಕೂರಿಸಿಕೊಂಡು ಹೈಜಾಕ್ ಮಾಡಿದ್ದಾರೆ. ಚಿಕ್ಕಜಾಲ ಬಳಿ ಡ್ರೈವರ್ ಮತ್ತು ರೈತನನ್ನು ಬಿಟ್ಟು ಟೊಮೆಟೊ ತುಂಬಿದ್ದ ವಾಹನ ಸಮೇತ ಎಸ್ಕೇಪ್ ಆಗಿದ್ದಾರೆ. ಘಟನೆ ಸಂಬಂಧ ಆರ್ ಎಂ ಸಿ ಎರಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.