ಮಂಗಳೂರು (ಬೆಂಗಳೂರು): ಇತ್ತೀಚೆಗೆ ಒಡಿಶಾ ನ್ಯೂಸ್ ಚಾನೆಲ್ ಓ ಟಿವಿ ಲೀಸಾ ಹೆಸರಿನ ಕೃತಕ ಬುದ್ಧಿಮತ್ತೆಯ ಸುದ್ದಿ ರೂಪಕಿಯನ್ನು ಪರಿಚಯಿಸಿ ದೇಶದ ಗಮನ ಸೆಳೆದಿತ್ತು. ಈಗ ಕನ್ನಡದಲ್ಲೂ ಇಂತಹ ಪ್ರಯತ್ನ ನಡೆದಿದ್ದು ಪವರ್ ಟಿವಿ ದಕ್ಷಿಣ ಭಾರತದ ಮೊದಲ ಕೃತಕ ಬುದ್ಧಿಮತ್ತೆಯ ಕನ್ನಡ ಸುದ್ದಿ ವಾಚಕಿಯನ್ನು ಪರಿಚಯಿಸಿದೆ.
ನೈಜ ಟಿವಿ ನಿರೂಪಕಿಯರನ್ನು ಹೋಲುವಂತೆ ಈ ಕೃತಕ ಬುದ್ಧಿಮತ್ತೆಯ ನಿರೂಪಕಿಯನ್ನು ರೂಪುಗೊಳಿಸಲಾಗಿದೆ. ಧ್ವನಿಯನ್ನು ನಿಜವಾದ ನಿರೂಪಕಿಯರೇ ನೀಡಿದ್ದರೂ ಹಾವ, ಭಾವ ಮುಖದ ಭಾವನೆಗಳು ತುಸು ಯಾಂತ್ರಿಕವಾಗಿ ಕಾಣಿಸುತ್ತಿದೆ ಎಂದು ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ. ಅದೇನಿದ್ದರೂ, ನಮಸ್ಕಾರ ಕನ್ನಡಿಗರೇ ಪವರ್ ಟಿವಿಗೆ ಸ್ವಾಗತ, ನಾನು ಸೌಂದರ್ಯ ದಕ್ಷಿಣ ಭಾರತದ ಮೊಟ್ಟಮೊದಲ ಕೃತಕ ಬುದ್ಧಿಮತ್ತೆಯ ಸುದ್ದಿ ವಾಚಕಿ ಎಂದು ಹೇಳುವ ಮೂಲಕ ಈ ನಿರೂಪಕಿ ತಂತ್ರಜ್ಞಾನದ ಹೊಸ ಸಾಧ್ಯತೆಯ ಬಾಗಿಲನ್ನು ತೆರೆದಿಟ್ಟಿದ್ದಾಳೆ.
ಪವರ್ ಟಿವಿಯು ಇದಕ್ಕಾಗಿ ಚಾಟ್ ಜಿಪಿಟಿ ಜೊತೆಗೆ ಡೀಪ್ ಬ್ರೇನ್ ಎಐ ಯ ಸ್ಟುಡಿಯೋ ಅವತಾರ್ ವಿಡಿಯೋ ಜನರೇಷನ್ ವೇದಿಕೆಯನ್ನು ಬಳಸಿಕೊಂಡಿದೆ. ಸೌಂದರ್ಯ ದಕ್ಷಿಣ ಭಾರತದ ಮೊದಲ ಕೃತಕ ಬುದ್ಧಿಮತ್ತೆಯ ನಿರೂಪಕಿ ಎಂದು ಪವರ್ ಟಿವಿ ಆರಂಭದಲ್ಲಿ ಹೇಳಿಕೊಂಡಿತ್ತು. ಆದರೆ ಕೇರಳ ಆಂಧ್ರದಲ್ಲಿ ಇಂತಹ ಪ್ರಯತ್ನ ಈಗಾಗಲೇ ನಡೆದಿರುವುದನ್ನು ಅರಿತ ಬಳಿಕ ದಕ್ಷಿಣ ಭಾರತದ ಮೊದಲ ಕನ್ನಡ ಕೃತಕ ಬುದ್ಧಿಮತ್ತೆಯ ನಿರೂಪಕಿ ಎಂದು ಸ್ಪಷ್ಟಪಡಿಸಿದೆ. ಇಂಡಿಯಾ ಟುಡೇ ಭಾರತದಲ್ಲಿ ಮೊದಲ ಬಾರಿಗೆ ಕೃತಕ ಬುದ್ಧಿಮತ್ತೆಯ ನಿರೂಪಕಿಯನ್ನು ಬಳಸಿಕೊಂಡಿತ್ತು. ಸನ ಹೆಸರಿನ ಈ ನಿರೂಪಕಿ ಇಂಡಿಯಾ ಟುಡೇ ಒಡೆತನದ ಆಜ್ ತಕ್ ಚಾನೆಲ್ ನಲ್ಲಿ ಸುದ್ದಿ ಓದುತ್ತಾಳೆ. 2018 ರಲ್ಲಿ ಜಗತ್ತಿನ ಮೊದಲ ಕೃತಕ ಬುದ್ಧಿಮತ್ತೆಯ ಸುದ್ದಿ ನಿರೂಪಕಿಯನ್ನು ಚೀನಾ ಪರಿಚಯಿಸಿದ್ದು ಬಳಿಕ ಕುವೈಟ್ ನಲ್ಲಿ ಪರಿಚಯಿಸಲಾಗಿತ್ತು.
ವೀಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ