ಪುಣಚ: ಐಡಿಯಲ್ ಸಂಸ್ಥೆಗೆ ಸೇರಿದ ಕೋಳಿ ಸಾಗಾಟದ ಪಿಕಪ್ ಚಾಲಕನ ನಿಯಂತ್ರಣ ತಪ್ಪಿ ಮನೆಯ ಮೇಲೆ ಬಿದ್ದು ಮಹಿಳೆಯೊಬ್ಬರು ಗಾಯಗೊಂಡ ಘಟನೆ ಪರಿಯಾಲ್ತಡ್ಕ ಸಾರಡ್ಕ ರಸ್ತೆಯ ಕೂರೇಲು ಎಂಬಲ್ಲಿ ನಡೆದಿದೆ.
ಘಟನಾ ಸ್ಥಳದಿಂದ ಒಂದು ಕಿಲೋಮೀಟರ್ ದೂರದಲ್ಲಿರುವ ಕೋಳಿ ಸಾಕಣೆ ಕೇಂದ್ರದಿಂದ ಕೋಳಿ ಲೋಡ್ ಮಾಡಿ ಬರುತ್ತಿದ್ದ ಪಿಕಪ್ ಇಳಿಜಾರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬದಿ ತಗ್ಗು ಪ್ರದೇಶದಲ್ಲಿದ್ದ ಮನೆಯ ಮಾಡಿನ ಮೇಲೆ ಬಿದ್ದಿದೆ. ಪಿಕಪ್ ಬೀಳುತ್ತಿದ್ದಂತೆ ಮನೆಯಲ್ಲಿದ್ದ ತಂದೆ ಮಗ ಮನೆಯಿಂದ ಹೊರಗೋಡಿ ಬಂದಿದ್ದಾರೆ. ಆದರೆ ಮಂಚದಲ್ಲಿ ಮಲಗಿದ್ದ ಮಹಿಳೆ ಅಪಾಯದ ಸ್ಥಿತಿಯಲ್ಲಿ ಸಿಲುಕಿಕೊಂಡಿದ್ದರು. ಪಿಕಪ್ ವಾಹನವನ್ನು ತೆರವುಗೊಳಿಸದೆ ಮಹಿಳೆಯನ್ನು ಹೊರ ತೆಗೆಯಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿತ್ತು. ಪೊಲೀಸರು, ತುರ್ತು ಸೇವಾ ವಾಹನ ಸ್ಥಳಕ್ಕೆ ಬಂದಿದ್ದು, ಸ್ಥಳೀಯರ ಸಹಕಾರದೊಂದಿಗೆ ಮಹಿಳೆಯನ್ನು ರಕ್ಷಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಮಹಿಳೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತಜ್ಞರ ನೆರವಿನೊಂದಿಗೆ ಕ್ರೇನ್ ಬಳಸಿ ಪಿಕಪ್ ಅನ್ನು ಮೇಲಕ್ಕೆತ್ತಲಾಗಿದೆ. ಘಟನೆಯಲ್ಲಿ ಪಿಕಪ್ ನಲ್ಲಿದ್ದ ನೂರಾರು ಕೋಳಿಗಳು ಸತ್ತು ಬಿದ್ದಿದೆ. ಅರುಣ್ ಕುಮಾರ್ ಪುತ್ತಿಲ ಸೇರಿದಂತೆ, ಪಂಚಾಯತ್ ಅಧಿಕಾರಿಗಳು, ಸ್ಥಳೀಯ ಗಣ್ಯರು ಸ್ಥಳಕ್ಕಾಗಮಿಸಿ ಅವಲೋಕನ ನಡೆಸಿದರು. ಗಾಯಗೊಂಡ ಮಹಿಳೆಯನ್ನು ಶೋಭಾ ಎಂದು ಗುರುತಿಸಲಾಗಿದೆ. ಹಾಸನ ಮೂಲದವರಾದ ಇವರು ಪತಿ ಮಂಜುನಾಥ್ ಮತ್ತು ಪುತ್ರ ಪುನೀತ್ ನೊಂದಿಗೆ ಪುಣಚದಲ್ಲಿ ಅಯ್ಯಂಗಾರ್ ಬೇಕರಿ ಉದ್ಯಮ ನಡೆಸುತ್ತಿದ್ದರು ಎನ್ನಲಾಗಿದೆ. ಘಟನೆಯಲ್ಲಿ ಮನೆಗೆ ಸಂಪೂರ್ಣವಾಗಿ ಹಾನಿಯಾಗಿದೆ. ಪೂರ್ತಿ ಕಾರ್ಯಾಚರಣೆಯಲ್ಲಿ ಸ್ಥಳೀಯರು ಭಾಗಿಯಾಗಿದ್ದು ಅಭಿನಂದನೀಯ.
ವೀಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ