ಮಂಗಳೂರು(ಬೆಂಗಳೂರು): ಚಲಿಸುತ್ತಿದ್ದ ಕಾರಲ್ಲಿ ಪತಿ ಜತೆ ಜಗಳವಾಡುತ್ತಿದ್ದ ಪತ್ನಿ ಕಾರಿನ ಸ್ಟೇರಿಂಗ್ ಎಳೆದಿದ್ದರಿಂದ ಕಾರುಪಲ್ಟಿಯಾದ ಘಟನೆ ಬೆಂಗಳೂರಿನ ಹಲಸೂರು ಗೇಟ್ ಪೊಲೀಸ್ ಠಾಣೆ ಬಳಿ ನಡೆದಿದೆ. ಘಟನೆಯಲ್ಲಿ ಪತಿ ಹಾಗೂ ಪತ್ನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೂಡಲೇ ಸ್ಥಳಕ್ಕೆ ಹಲಸೂರು ಗೇಟ್ ಪೊಲೀಸರು ದಂಪತಿಯನ್ನು ರಕ್ಷಿಸಿದ್ದು, ವಿಚಾರಣೆ ನಡೆಸಿದ್ದಾರೆ.
ಮಾರ್ಕೆಟ್ ಕಡೆಯಿಂದ ಬರುತ್ತಿದ್ದ ಐ20 ಕಾರಿನಲ್ಲಿ ಕ್ಷುಲ್ಲಕ ವಿಚಾರಕ್ಕೆ ಗಂಡ-ಹೆಂಡತಿ ಮಧ್ಯೆ ಮಾತಿಗೆ ಮಾತು ಬೆಳೆದಿದೆ. ಜಗಳ ವಿಕೋಪಕ್ಕೆ ತಿರುಗಿದ್ದು, ಕೋಪಗೊಂಡ ಪತ್ನಿ ಇದ್ದಕ್ಕಿದ್ದಂತೆ ಕಾರಿನ ಸ್ಟೇರಿಂಗ್ ಎಳೆದಿದ್ದಾಳೆ. ಪರಿಣಾಮ ಹಲಸೂರು ಗೇಟ್ ಠಾಣೆ ಸಮೀಪ ನಿಯಂತ್ರಣ ಕಳೆದುಕೊಂಡು ಕಾರು ಪಲ್ಟಿಯಾಗಿದೆ. ಪತಿ ಕುಡಿದ ಅಮಲಿನಲ್ಲಿ ಕಾರು ಚಲಾಯಿಸಿರುವ ಶಂಕೆಯೂ ವ್ಯಕ್ತವಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.