ಮಂಗಳೂರು(ಹೊಸದಿಲ್ಲಿ): ಬುಧವಾರ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿದ್ದ ಯಮುನಾ ನದಿಯ ನೀರಿನ ಮಟ್ಟವು ನಿಧಾನವಾಗಿ ಕಡಿಮೆಯಾಗುತ್ತಿದ್ದರೂ ಕೂಡ ದಿಲ್ಲಿಯ ಹಲವಾರು ಪ್ರದೇಶಗಳು ಜಲಾವೃತವಾಗಿವೆ. ನಗರದ ಮಧ್ಯ ಭಾಗದಲ್ಲಿರುವ ತಿಲಕ್ ಮಾರ್ಗ್ ಪ್ರದೇಶದಲ್ಲಿರುವ ಸುಪ್ರೀಂಕೋರ್ಟ್ ಗೂ ಪ್ರವಾಹದ ನೀರು ತಲುಪಿದೆ.
ಐಟಿಒ ಹಾಗೂ ರಾಜ್ಘಾಟ್ ನಲ್ಲಿರುವ ಪ್ರದೇಶಗಳು ಮುಳುಗಡೆಯಾಗಿದ್ದು, ದಿಲ್ಲಿ ನೀರಾವರಿ ಮತ್ತು ಪ್ರವಾಹ ನಿಯಂತ್ರಣ ಇಲಾಖೆಯ ನಿಯಂತ್ರಕ ಇಂದ್ರಪ್ರಸ್ಥದ ಬಳಿ ಹಾನಿಯಾಗಿದೆ, ಇದು ಈಗಾಗಲೇ ಭೀಕರ ಪರಿಸ್ಥಿತಿಯನ್ನು ಉಲ್ಬಣಗೊಳಿಸಿದೆ. ನಿಯಂತ್ರಕಕ್ಕೆ ಆಗಿರುವ ಹಾನಿಯ ವಿಷಯವನ್ನು ಆದ್ಯತೆಯ ಮೇಲೆ ಕೈಗೆತ್ತಿಕೊಂಡು ಸಮಸ್ಯೆ ಬಗೆಹರಿಸುವಂತೆ ಮುಖ್ಯ ಕಾರ್ಯದರ್ಶಿಗೆ ಸರಕಾರ ಸೂಚಿಸಿದೆ ಎಂದು ದಿಲ್ಲಿ ಕ್ಯಾಬಿನೆಟ್ ಸಚಿವ ಸೌರಭ್ ಭಾರದ್ವಾಜ್ ಹೇಳಿದ್ದಾರೆ.