ಮಂಗಳೂರು(ದೆಹಲಿ): ಯಮುನಾ ನದಿ ನೀರು ಉಕ್ಕೇರಿ ರಸ್ತೆಗಳಿಗೆ ಹರಿದು ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಮನೆಗಳು, ಮಳಿಗೆಗಳು ಹಾಗೂ ಕಾರುಗಳು ಮುಳುಗಿ ದಿಲ್ಲಿ ನಿವಾಸಿಗಳು ಅದರಿಂದ ಪಾರಾಗಲು ಹರಸಾಹಸ ಪಡುತ್ತಿದ್ದಾರೆ. ಈ ಸಂಕಷ್ಟದ ನಡುವೆ ರಸ್ತೆಯಲ್ಲಿ ಹರಿಯುತ್ತಿರುವ ನೀರಿನಲ್ಲಿ ವಿದ್ಯುತ್ ಕಂಬಗಳಿಂದ ವಿದ್ಯುತ್ ಪ್ರವಹಿಸುತ್ತಿದ್ದು ದಿಲ್ಲಿ ನಿವಾಸಿಗಳ ಗೋಳು ಮತ್ತಷ್ಟು ಹೆಚ್ಚಾಗಿದೆ.
ಯಮುನಾ ನದಿಯ ಬದಿ ರಸ್ತೆಯಲ್ಲಿ ಓಡಾಡಬೇಕಾದ ಅನಿವಾರ್ಯತೆಗೆ ಸಿಲುಕಿರುವ ದಿಲ್ಲಿ ನಾಗರಿಕರು ದಿಲ್ಲಿಯ ಐಟಿಒ ಬಳಿ ಬರಿಗಾಲಲ್ಲಿ ನಡೆಯುವಾಗ ವಿದ್ಯುತ್ ಕಂಬಗಳಿಂದ ವಿದ್ಯುತ್ ಶಾಕ್ ಅನುಭವಿಸುತ್ತಿದ್ದಾರೆ. ಶುಕ್ರವಾರ ಮುಂಜಾನೆ ಐಟಿಓ ಬದಿ ರಸ್ತೆಯನ್ನು ದಾಟಲು ಹಲವು ಜನರು ಸರತಿಯಲ್ಲಿ ನಿಂತಿದ್ದಾಗ ಅಲ್ಲಿರುವ ಕೆಲವರು ವಿದ್ಯುತ್ ಕಂಬಗಳಿಂದ ವಿದ್ಯುತ್ ಪ್ರವಹಿಸುತ್ತಿದ್ದರಿಂದ ವಿದ್ಯುತ್ ಅಘಾತ ಅನುಭವಿಸಿದ್ದಾರೆ. ಸುದ್ದಿ ತಿಳಿದ ನಂತರ ಸಂಬಂಧಿತ ಪ್ರಾಧಿಕಾರಗಳು ಈ ವಿದ್ಯುತ್ ಕಂಬಗಳಿಗೆ ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಿವೆ.