ಮಂಗಳೂರು (ಶಿವಮೊಗ್ಗ): ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಂಡಿದ್ದ ಶಿವಮೊಗ್ಗ ವಿಮಾನ ನಿಲ್ದಾಣವು ಆಗಸ್ಟ್ 11 ರಿಂದ ಕಾರ್ಯಾರಂಭ ಮಾಡುವ ಸಾಧ್ಯತೆ ಇದ್ದು ಜುಲೈ 20ರೊಳಗೆ ವಿಮಾನ ನಿಲ್ದಾಣದಲ್ಲಿ ಬಾಕಿ ಉಳಿದಿರುವ ಎಲ್ಲಾ ಕೆಲಸಗಳು ಪೂರ್ಣಗೊಳ್ಳಲಿವೆ ಎಂದು ಬೃಹತ್ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ ಬಿ ಪಾಟೀಲ್ ಹೇಳಿದ್ದಾರೆ.
ರಾಜ್ಯದ ಹೊಸ ವಿಮಾನ ನಿಲ್ದಾಣಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಚಿವರು, ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಅಂಬ್ಯುಲೆನ್ಸ್ ಮತ್ತು ಇತರ ವಾಹನಗಳ ಸೇವೆಗಳನ್ನು ಆರಂಭಿಸಲಾಗುವುದು. ಇದಲ್ಲದೆ ಕೆಲವು ತಾಂತ್ರಿಕ ಮತ್ತು ತಾಂತ್ರಿಕೇತರ ಸಿಬ್ಬಂದಿಗಳನ್ನು ನೇಮಿಸಬೇಕಾಗಿದೆ. ಈ ಎಲ್ಲಾ ಅವಶ್ಯಕತೆಗಳನ್ನು ಪೂರೈಸುವ ಮೂಲಕ ಜುಲೈ 20ರೊಳಗೆ ವಿಮಾನ ನಿಲ್ದಾಣವು ಕಾರ್ಯಾಚರಣೆಗೆ ಸಿದ್ಧವಾಗಲಿದೆ ಎಂದು ಹೇಳಿದ್ದಾರೆ.
ಶಿವಮೊಗ್ಗ ವಿಮಾನ ನಿಲ್ದಾಣವು ರಾಜ್ಯ ಸರಕಾರದ ಸಂಸ್ಥೆಯಿಂದ ನಿರ್ವಹಿಸಲ್ಪಡುವ ಮೊದಲ ವಿಮಾನ ನಿಲ್ದಾಣವಾಗಲಿದೆ. ನಾಗರಿಕ ವಿಮಾನಯಾನ ನಿರ್ದೇಶನಾಲಯವು ಈ ವಿಮಾನ ನಿಲ್ದಾಣದ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ನಡೆಸಲು ಕರ್ನಾಟಕ ರಾಜ್ಯ ಕೈಗಾರಿಕೆಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮಕ್ಕೆ ಅನುಮತಿ ನೀಡಿದೆ ಎಂದರು. ಕಾಮಗಾರಿಗಳು ನಿಗದಿತ ವೇಳೆಯಲ್ಲಿ ಪೂರ್ಣಗೊಂಡರೆ ಆಗಸ್ಟ್ 11ರಂದು ಬೆಂಗಳೂರಿನಿಂದ ಮೊದಲ ವಿಮಾನವು ಶಿವಮೊಗ್ಗದಲ್ಲಿ ಬಂದಿಳಿಯಲಿದೆ. ಆ ಐತಿಹಾಸಿಕ ಕ್ಷಣದಲ್ಲಿ ಪಾಲ್ಗೊಳ್ಳಲು ಜನಪ್ರತಿನಿಧಿಗಳು ಸೇರಿದಂತೆ ಎಲ್ಲರನ್ನೂ ಆಹ್ವಾನಿಸಲಾಗವುದು ಎಂದು ಸಚಿವರು ಹೇಳಿದ್ದಾರೆ.