ಮಂಗಳೂರು (ಬೆಂಗಳೂರು): ಬಿಜೆಪಿಯನ್ನು ಕಟ್ಟಿ ಹಾಕಲು ಮಹಾಘಟ್ ಬಂಧನ್
ನಾಯಕರು ಬೆಂಗಳೂರಿನಲ್ಲಿ ಒಗ್ಗಟ್ಟು ಪ್ರದರ್ಶನಕ್ಕೆ ಮುಂದಾಗಿರುವಂತೆಯೇ ದಳಪತಿ ಎಚ್ ಡಿ ಕುಮಾರಸ್ವಾಮಿ ಬಿಜೆಪಿ ಜೊತೆ ಸಕ್ಯ ಬೆಳೆಸಲು ದೆಹಲಿಗೆ ತೆರಳುವ ಸಾಧ್ಯತೆ ದಟ್ಟವಾಗಿದೆ.
ತೆನೆ ಹೊತ್ತ ಮಹಿಳೆ ಕಮಲ ಮುಡಿಯುವುದು ಬಹುತೇಕ ಫಿಕ್ಸ್ ಆಗಿದ್ದು ದೆಹಲಿಯಲ್ಲಿ ಅಂತಿಮ ಮುದ್ರೆ ಬೀಳುವ ಸಾಧ್ಯತೆ ದಟ್ಟವಾಗಿದೆ. ಎನ್‌ಡಿಎ ಸಭೆಗೂ ಮುನ್ನ ಬಿಜೆಪಿ ನಾಯಕರ ಜೊತೆ ಕುಮಾರಸ್ವಾಮಿ ಮಾತುಕತೆ ನಡೆಸುವ ಸಾಧ್ಯತೆ ಇದ್ದು, ಈಗಾಗಲೇ ಪ್ರಧಾನಿ ಮೋದಿ ಜೊತೆಗೆ ಉತ್ತಮ ಬಾಂಧವ್ಯದ ಮಾತುಗಳನ್ನಾಡಿರುವ ಮಾಜಿ ಸಿಎಂ ಕುಮಾರಸ್ವಾಮಿ ಒಂದೆರಡು ದಿನದಲ್ಲಿ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.
ವಿರೋಧಪಕ್ಷಗಳ ಸಭೆಯ ನಡುವೆಯೇ ಬಿಜೆಪಿಯು ತನ್ನ ಬಲ ಹೆಚ್ಚಿಸಿಕೊಳ್ಳಲು ಜುಲೈ 18ರಂದು ಸಭೆ ನಡೆಸಿ, ಎನ್ ಡಿ ಎ ಮೈತ್ರಿಕೂಟವನ್ನು ಮತ್ತೆ ಬಲಪಡಿಸಿ ಅಧಿಕಾರದ ಗದ್ದುಗೆ ಉಳಿಸಿಕೊಳ್ಳುವ ಪ್ರಯತ್ನಕ್ಕೆ ಮುಂದಾಗಿದೆ. ಈ ಪೈಕಿ ಜೆಡಿಎಸ್ ಗೂ ಗಾಳ ಹಾಕಿದೆ. ಈಗಾಗಲೇ ಮಹಾರಾಷ್ಟ್ರದ ಶಿವಸೇನೆಯ ಏಕನಾಥ ಶಿಂದೆ ಬಣ, ಎನ್‌ಸಿಪಿಯ ಅಜಿತ್ ಪವಾರ್ ಬಣ ಎನ್.ಡಿ.ಎ ಕಡೆಗೆ ವಾಲಿದೆ. ಹಳೆ ಮಿತ್ರ ಪಕ್ಷಗಳಾದ ಶಿರೋಮಣಿ ಅಕಾಲಿ ದಳ, ತೆಲುಗು ದೇಶಂ ಪಾರ್ಟಿಗೂ ನಡ್ಡಾ ಆಹ್ವಾನ ನೀಡಿದ್ದಾರೆ. ಇನ್ನೂ ಪವನ್ ಕಲ್ಯಾಣ್ ಅವರ ಹೊಸ ಪಕ್ಷ ಜನ ಸೇನಾ ಕೂಡ ಎನ್.ಡಿ.ಎ ಜೊತೆ ಗುರುತಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ.
ಜೆಡಿಎಸ್ ನಾಯಕ ಕುಮಾರಸ್ವಾಮಿ ಈವರೆಗೆ ತಮ್ಮ ನಡೆಯ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ ಆದರೆ ಬಿಜೆಪಿ ನಾಯಕರು ಈ ಬಗ್ಗೆ ಸುಳಿವು ನೀಡಿದ್ದಾರೆ. ಕುಮಾರಸ್ವಾಮಿ ಬಿಜೆಪಿ ಜೊತೆ ಮೈತ್ರಿ ಮಾಡುವುದರ ಹಿಂದೆ ಭಾರಿ ಲೆಕ್ಕಾಚಾರ ಅಡಗಿದೆ. ಬಿಜೆಪಿ ಮೈತ್ರಿಕೂಟ ಸೇರಿದರೆ ಚುನಾವಣೆಯಲ್ಲಿ ಮತ್ತಷ್ಟು ಬಲ ಸಿಗಲಿದೆ, ಎರಡು ಪಕ್ಷ ಮೈತ್ರಿ ಆದರೆ ಕಾಂಗ್ರೆಸ್ ಎದುರಿಸುವುದು ಸುಲಭವಾಗಲಿದೆ ಎನ್ನುವ ಲೆಕ್ಕಾಚಾರ ಅವರದ್ದು. ಹಳೆ ಮೈಸೂರು ಭಾಗದಲ್ಲಿ ಮೂರರಿಂದ ನಾಲ್ಕು ಸ್ಥಾನ ಗೆಲ್ಲಲು ಅವಕಾಶ ಸಿಗಲಿದೆ ಎನ್ನುವ ಹಿನ್ನೆಲೆಯಲ್ಲಿ ತಿಂಗಳ ಹಿಂದೆಯೇ ಬಿಜೆಪಿ ನಾಯಕರನ್ನ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಇದೀಗ ಮತ್ತೆ ದೆಹಲಿ ಬಿಜೆಪಿ ನಾಯಕರನ್ನ ಎಚ್ ಡಿ ಕೆ ಭೇಟಿಯಾಗುತ್ತಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಅದೇನಿದ್ದರೂ ದೆಹಲಿ ನಾಯಕರ ಭೇಟಿಯ ಬಳಿಕ ಕುಮಾರಸ್ವಾಮಿ ಕೇಂದ್ರ ಸಚಿವರ ಪಟ್ಟ ಅಲಂಕರಿಸಲಿದ್ದಾರೆಯೇ? ರಾಜ್ಯ ವಿಧಾನಸಭಾ ವಿಪಕ್ಷ ನಾಯಕನಾಗಿ ಆಯ್ಕೆಯಾಗಲಿದ್ದಾರೆಯೇ? ಪಕ್ಷವನ್ನು ಬಿಜೆಪಿ ಜೊತೆ ವಿಲೀನಗೊಳಿಸಲಿದ್ದಾರೆಯೇ? ಅಥವಾ ಮೈತ್ರಿ ಮಾಡಿಕೊಳ್ಳಲಿದ್ದಾರೆಯೇ? ಎನ್ನುವ ಪ್ರಶ್ನೆಗಳಿಗೆ ಜುಲೈ 18 ರಂದು ನಡೆಯುವ ಎನ್ ಡಿಎ ಸಭೆಯ ಬಳಿಕ ಉತ್ತರ ಸಿಗಲಿದೆ. ಜುಲೈ 18 ರಂದು ನಡೆಯುವ ಎನ್‌ಡಿಎ ಮಿತ್ರ ಪಕ್ಷಗಳ ಸಭೆಗೆ ಬಿಜೆಪಿ ಈಗಾಗಲೇ ಎಚ್ ಡಿ ದೇವೇಗೌಡ ಮತ್ತು ಕುಮಾರಸ್ವಾಮಿಯವರಿಗೆ ಆಹ್ವಾನ ನೀಡಿದೆ.