ಮಂಗಳೂರು (ಬೆಂಗಳೂರು): ಕೇರಳದ ಮಾಜಿ ಮುಖ್ಯಮಂತ್ರಿ ಕಾಂಗ್ರೆಸ್ ನ ಹಿರಿಯ ನಾಯಕ ಉಮ್ಮನ್ ಚಾಂಡಿ ಇಂದು (ಜು.18) ಬೆಳಿಗ್ಗೆ ನಿಧನರಾದರು. ಅವರಿಗೆ 79 ವರ್ಷ ವಯಸ್ಸಾಗಿತ್ತು. ಉಮ್ಮನ್ ಚಾಂಡಿ ನಿಧನ ವಾರ್ತೆಯನ್ನು ಅವರ ಪುತ್ರ ಫೇಸ್ಬುಕ್ ಪೋಸ್ಟ್ ಮೂಲಕ ತಿಳಿಸಿದ್ದಾರೆ.
ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಚಾಂಡಿ ಅವರಿಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಉಮ್ಮನ್ ಚಾಂಡಿ ಎರಡು ಬಾರಿ ಕೇರಳದ ಮುಖ್ಯಮಂತ್ರಿ ಆಗಿದ್ದರು. 2004 ರಿಂದ 2006 ರ ವರೆಗೆ ಮೊದಲ ಬಾರಿ ಸಿಎಂ ಆಗಿದ್ದರು. 2011 ರಿಂದ 2016 ರ ವರೆಗೆ ಎರಡನೇ ಬಾರಿಗೆ ಅಧಿಕಾರ ನಡೆಸಿದ್ದರು. ಪುತ್ತುಪ್ಪಲ್ಲಿ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಉಮ್ಮನ್ ಚಾಂಡಿ, 1970 ರಿಂದ ಕೇರಳ ವಿಧಾನಸಭೆಗೆ ನಿರಂತರವಾಗಿ ಆಯ್ಕೆಯಾಗಿದ್ದರು. ವಿಶ್ವಸಂಸ್ಥೆಯಿಂದ ಸಾರ್ವಜನಿಕ ಸೇವೆಗಾಗಿ ಪ್ರಶಸ್ತಿಯನ್ನು ಗಳಿಸಿದ ಏಕೈಕ ಭಾರತೀಯ ಮುಖ್ಯಮಂತ್ರಿ ಎನ್ನುವ ಹೆಗ್ಗಳಿಕೆಯನ್ನು ಗಳಿಸಿದ್ದರು.