ಮಗನ ಕಾಲೇಜು ಶುಲ್ಕ ಪಾವತಿಗೆ ಹಣ ಹೊಂದಿಸಲು ಬಸ್ ನಡಿಗೆ ಬಿದ್ದು ತಾಯಿ ಆತ್ಮಹತ್ಯೆ 

ಮಂಗಳೂರು(ಚೆನ್ನೈ): ಮಗನ ಶಿಕ್ಷಣಕ್ಕಾಗಿ ಹಣ ಹೊಂದಿಸಲು ಹೆತ್ತಮ್ಮ ಬಸ್ಸಿನಡಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಮಕ್ಕಳಿಗಾಗಿ ತಾಯಿಯ ತ್ಯಾಗದ ಕತೆಗೆ ಇದೊಂದು ಹೊಸ ಸೇರ್ಪಡೆಯಾಗಿದೆ.

ವರದಿಗಳ ಪ್ರಕಾರ, ಸೇಲಂ ಜಿಲ್ಲೆಯ ಕಲೆಕ್ಟರ್ ಕಚೇರಿಯಲ್ಲಿ ಸಫಾಯಿ ಕರ್ಮಚಾರಿಯಾಗಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ಉದ್ದೇಶಪೂರ್ವಕವಾಗಿ ಬಸ್ ನ ಮುಂದೆ ಜಿಗಿದಿರುವುದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ ಕಂಡುಬಂದಿದೆ.

ಅಪಘಾತದಲ್ಲಿ ಮೃತಪಟ್ಟರೆ ನಿಮ್ಮ ಕುಟುಂಬಕ್ಕೆ 45,000 ರೂ. ಲಭಿಸುವುದಾಗಿ ಹೇಳಿ ಯಾರೋ ಆ ತಾಯಿಯನ್ನು ದಾರಿ ತಪ್ಪಿಸಿದ್ದರಿಂದ ಮಹಿಳೆ ಈ ರೀತಿ ಮಾಡಿದ್ದಾರೆ ಎಂದು ಹೇಳಲಾಗಿದೆ. ಮಗನ ಕಾಲೇಜು ಶುಲ್ಕ ಪಾವತಿಸಲು ಹಣದ ಅಗತ್ಯವಿದ್ದು, ತನ್ನ ಜೀವನವನ್ನು ಮಗನಿಗಾಗಿ, ಮಗನ ಶಿಕ್ಷಣಕ್ಕಾಗಿ ಕೊನೆಗೊಳಿಸಲು ಅಸಹಾಯಕ ಮಹಿಳೆ ನಿರ್ಧರಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.

ಈ ವೀಡಿಯೋ ನೆಟ್ಟಿಗರ ಗಮನ ಸೆಳೆದಿದ್ದು, ವೀಡಿಯೊವನ್ನು ಟ್ವೀಟ್ ಮಾಡಿದ ಜನರು ಹಾಗೂ ಟ್ವಿಟರ್ ಬಳಕೆದಾರರು ಘಟನೆಯ ಬಗ್ಗೆ  ಅತೀವ ದುಃಖ ಮತ್ತು ಕೋಪವನ್ನು ವ್ಯಕ್ತಪಡಿಸಿದ್ದಾರೆ. ತನ್ನ ಮಗನ ಫೀಸ್ ಕಟ್ಟುವುದಕ್ಕಾಗಿ ತಾಯಿಯೊಬ್ಬಳು ಆತ್ಮಹತ್ಯೆಗೆ ಶರಣಾದ ಸನ್ನಿವೇಶ ಎದುರಾದ ಬಗ್ಗೆ  ಹಲವು ಪ್ರಶ್ನೆಗಳು ಉದ್ಭವಿಸಿದೆ.

ಉತ್ತಮ ಭವಿಷ್ಯದ ನಿರೀಕ್ಷೆಯಲ್ಲಿ ತಮ್ಮ ಮಕ್ಕಳಿಗೆ ಶಿಕ್ಷಣ ನೀಡುವುದರ ಜೊತೆಗೆ ಜೀವನ ಸಾಗಿಸಲು ಪ್ರಯತ್ನಿಸುವವರು ಎದುರಿಸುತ್ತಿರುವ ತೊಂದರೆಗಳನ್ನು ಈ ಘಟನೆ ಎತ್ತಿ ತೋರಿಸುತ್ತದೆ. ಯಾರೂ ಇಂತಹ ಹೆಜ್ಜೆ ಇಡದಿರುವುದೇ ನಿಜವಾದ ಅಭಿವೃದ್ಧಿ ಎಂದು ಟ್ವೀಟ್ ಮಾಡಲಾಗಿದೆ. ಪೊಲೀಸರು ಎಲ್ಲಾ ಆಯಾಮಗಳಿಂದಲೂ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದು,ತನಿಖೆಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ ಎಂದು ವರದಿಗಳು ತಿಳಿಸಿವೆ.

ವೀಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here